ಜೀವನದಲ್ಲಿ ‌ಮದುವೆಯ ಎಂಬ ಎರಡನೇ ಇನಿಂಗ್ಸ್ ಬಹು ಮುಖ್ಯ

ಜೀವನದಲ್ಲಿ ‌ಮದುವೆಯ ಎಂಬ ಎರಡನೇ ಇನಿಂಗ್ಸ್ ಬಹು ಮುಖ್ಯ.

Your Image Ad

ಸರಳ ವಿವಾಹ -
ಅಂತರ್ಜಾತಿಯ ವಿವಾಹ -
ಬಸವಣ್ಣ - ಕುವೆಂಪು -
ಮಂತ್ರ ಮಾಂಗಲ್ಯ -
ಬಸವ ತತ್ವ ಮದುವೆ -
ಕಡಲತೀರದ ಸುರತ್ಕಲ್ -
ವಿವೇಕ್ ಗೌಡ - ಶಿವಾನಿ ಶೆಟ್ಟಿ -

Your Image Ad

ಮದುವೆ ಎಂಬುದು ಸಾಮಾನ್ಯ ಜನರ ಬದುಕಿನಲ್ಲಿ ಎರಡನೇ ಇನ್ನಿಂಗ್ಸ್ ಆರಂಭವಾದಂತೆ.

ಬಾಲ್ಯ - ಶಿಕ್ಷಣ - ಉದ್ಯೋಗದ ನಂತರದ ಪ್ರಮುಖ ಘಟ್ಟ ವಿವಾಹ. ಗಂಡು ಹೆಣ್ಣು ಎಂಬ ಎರಡು ಭಿನ್ನ ಲಿಂಗಗಳ ಮನಸ್ಸು ದೇಹ ಮತ್ತು ಬದುಕು ಬೆಸೆಯುವ ಕ್ರಿಯೆಗೆ ಮದುವೆ ಎಂದು ಹೆಸರಿಡಲಾಗಿದೆ. ಬಹುಶಃ ಜಗತ್ತಿನ ಎಲ್ಲಾ ಮಾನವ ಸಮಾಜಗಳಲ್ಲಿ ಇದು ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿದೆ.

ಆದರೆ ಆಧುನಿಕತೆ ಬೆಳೆದಂತೆಲ್ಲಾ ಒಂದು ಮಾತು ಹೆಚ್ಚು ಚಾಲ್ತಿಗೆ ಬಂದಿತು - " ಮದುವೆ ಮಾಡಿ ನೋಡು - ಮನೆ ಕಟ್ಟಿ ನೋಡು " ಅಂದರೆ ಎರಡೂ ಬಹುದೊಡ್ಡ ಕೆಲಸಗಳು. ಅದನ್ನು ನಿಭಾಯಿಸುವುದು ತುಂಬಾ ಕಷ್ಟ. ಬಹುತೇಕ ಮಾಧ್ಯಮ ವರ್ಗದ ಜನರು ಈ ಎರಡು ಕಾರ್ಯ ನಿರ್ವಹಿಸಲು ಇಡೀ ಜೀವನ ಶ್ರಮ ಪಡುತ್ತಾರೆ. ಕೆಲವರು ಸಾಲಗಾರರಾಗುತ್ತಾರೆ, ಕೆಲವರು ನಿಭಾಯಿಸಲಾಗದೆ ಆತ್ಮಹತ್ಯೆಗೂ ಶರಣಾಗುತ್ತಾರೆ ಎಂಬುದು ಲೋಕ ರೂಢಿಯ ಮಾತಾಯಿತು.

ಇದನ್ನು ಮನಗಂಡ ರಾಷ್ಟ್ರ ಕವಿ ಕುವೆಂಪು ಮದುವೆಗಳನ್ನು ಸರಳಗೊಳಿಸುವ ಪ್ರಯತ್ನವಾಗಿ ಮಂತ್ರ ಮಾಂಗಲ್ಯ ಎಂಬ ಸರಳ ವಿವಾಹ ಪದ್ದತಿಯ ಕ್ರಮಗಳನ್ನು ಪ್ರಚುರಪಡಿಸಿದರು ಮತ್ತು ತಮ್ಮ ಮಗ ಪೂರ್ಣ ಚಂದ್ರ ತೇಜಸ್ವಿ ಮತ್ತು ರಾಜೇಶ್ವರಿ ಅವರ ವಿವಾಹವನ್ನು ಈ ಪದ್ದತಿಯಲ್ಲಿ ನೆರವೇರಿಸಿದರು.

ಅಲ್ಲಿಂದ ಇಲ್ಲಿಯವರೆಗೆ ಈ ರೀತಿಯ ಒಂದಷ್ಟು ವಿವಾಹಗಳು ಜಾಗೃತ ಮನಸ್ಥಿತಿಯ ಕೆಲವರಲ್ಲಿ ನಡೆದಿದೆ. ಆದರೆ ನಿರೀಕ್ಷಿಸಿದಷ್ಟು ಜನಪ್ರಿಯತೆ ಇನ್ನೂ ಪಡೆದಿಲ್ಲ.

ಮೂರು ವರ್ಷಗಳ ಹಿಂದೆ ಆತ್ಮೀಯ ಗೆಳೆಯರಾದ ಆಹಾರ ಸಂರಕ್ಷಣಾ ಜನಜಾಗೃತಿ ಅಭಿಯಾನದ ರೂವಾರಿಗಳಾದ ಎಂ ಯುವರಾಜ್ ಮತ್ತು ಮಮತಾ ಅವರು ಮಂತ್ರಮಾಂಗಲ್ಯ ಪದ್ದತಿಯಂತೆ ಬೆಂಗಳೂರಿನಲ್ಲಿ ಮದುವೆಯಾಗಿದ್ದರು. ಆ ಕಾರ್ಯಕ್ರಮದಲ್ಲಿ ನಾನು ಸಹ ಅತಿಥಿ.

ಹಾಸನ ಸಕಲೇಶಪುರ ಬಳಿಯ ಅತ್ತಿಹಳ್ಳಿಯ ಕ್ರಿಯಾಶೀಲ ಚಟುವಟಿಕೆಯ ಕನಸುಗಾರ ಛಾಯಾಗ್ರಾಹಕ ಯುವ ಮಿತ್ರ ವಿವೇಕ್ ಮತ್ತು ಮಂಗಳೂರಿನ ಇಂಟಿರಿಯರ್ ಡಿಸೈನರ್ ಶಿವಾನಿ ಎಂಬ ಗೆಳೆಯ ಮತ್ತು ‌ಗೆಳತಿ ಸಾಕಷ್ಟು ಆರ್ಥಿಕ ಅನುಕೂಲ ಇದ್ದರೂ ಮಂತ್ರ ಮಾಂಗಲ್ಯದ ಸರಳ ವಿವಾಹ ಆಗುವುದಾಗಿ ಹೇಳಿದಾಗ ಮತ್ತು ನೀತಿ ಸಂಹಿತೆ ಭೋದಿಸಲು ವಿನಂತಿಸಿದಾಗ ಒಪ್ಪಿಕೊಂಡೆ.

ಬೆಂಗಳೂರಿನಿಂದ ನಾವು ಮೂರು ಜನ ಸ್ನೇಹಿತರು ರೈಲಿನಲ್ಲಿ ಮಂಗಳೂರಿಗೆ ಪ್ರಯಾಣಿಸಿದೆವು. ಸಕಲೇಶಪುರದಿಂದ ಮಂಗಳೂರಿನವರೆಗೆ ಅತ್ಯಂತ ಸುಂದರ ದೃಶ್ಯ ವೈಭವವನ್ನು ಸವಿಯುತ್ತಾ ಪ್ರಯಾಣ ಒಂದು ಒಳ್ಳೆಯ ಅನುಭವ ನೀಡಿತು.

ಮಾರನೆಯ ದಿನ ಸುರತ್ಕಲ್ ಬಳಿಯ ಸಾಂಪ್ರದಾಯಿಕ ಹೆಂಚಿನ ಮನೆಯ ಮುಂದಿನ ಮಾವು ಬಾಳೆ ಹೂವಿನ ಗಿಡಗಳ ಜಾಗದಲ್ಲಿ ಹೂವಿನಿಂದ ಅಲಂಕರಿಸಿದ ಸರಳ ಸುಂದರ ವಾತಾವರಣದಲ್ಲಿ ಗಂಡು ಹೆಣ್ಣು ಮತ್ತು ಅವರ ಪೋಷಕರು ಹಾಗು ಸಂಬಂಧಿಗಳು ಸ್ನೇಹಿತರು ಹಿತೈಷಿಗಳ ಸಮ್ಮುಖದಲ್ಲಿ ಮಂತ್ರ ಮಾಂಗಲ್ಯ ನೀತಿ ಭೋದಿಸುವ ಮೂಲಕ ವಿವಾಹ ನೆರವೇರಿತು.

ಕೊನೆಯಲ್ಲಿ ಯುವರಾಜ್ ಅವರು ಆಹಾರದ ಮಹತ್ವ ಮತ್ತು ಆಹಾರ ವ್ಯರ್ಥ ಮಾಡದೆ ಅದನ್ನು ಸದುಪಯೋಗ ಮಾಡುವ ಪ್ರತಿಜ್ಞಾ ವಿಧಿ ಭೋದಿಸಿದರು.

ಸಾಹಿತಿ ಪತ್ರಕರ್ತ ವಿಲ್ಸನ್ ಕಟೀಲು ಕಾರ್ಯಕ್ರಮ ‌ನಿರೂಪಿಸಿದರು ಮತ್ತು ಹೋರಾಟಗಾರರಾದ ದಿನೇಶ್ ಹೊಳ್ಳ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮನುಷ್ಯ ಸಂಬಂಧಗಳಲ್ಲಿ ಅತ್ಯಂತ ಗಾಢ ಮತ್ತು ಮುಕ್ತ ಸಂಬಂಧವೆಂದರೆ ಅದು ಪತಿ ಪತ್ನಿಯ ಸಂಬಂಧ. ಆದರೆ ಆಧುನಿಕ ಸಮಾಜದಲ್ಲಿ ಇದು ವ್ಯಾಪಾರದ ಒಪ್ಪಂದದ ರೀತಿಯಲ್ಲಿ ಮಾರ್ಪಡುತ್ತಿರುವುದು ವಿಷಾದಕರ ಸಂಗತಿ.

ಮದುವೆಗಳಲ್ಲಿ ಕೇವಲ ಆಚರಣೆಗಳಿಗೆ ಹೆಚ್ಚಿನ ಮಹತ್ವ ನೀಡಿ ಆಡಂಬರದ ಪ್ರದರ್ಶನ ಇರುತ್ತದೆ. ಶಾಸ್ತ್ರ ಸಂಪ್ರದಾಯಗಳು ರಾರಾಜಿಸುತ್ತವೆ. ಗಂಡು ಹೆಣ್ಣಿಗೆ ಮದುವೆಯ ಮಹತ್ವ ಮತ್ತು ಮುಂದಿನ ಜೀವನದ ಜವಾಬ್ದಾರಿ ಮತ್ತು ಕರ್ತವ್ಯಗಳು ಬಗ್ಗೆ ತಿಳಿವಳಿಕೆ ಇರುವುದಿಲ್ಲ. ಆದರೆ ಈ ಮಂತ್ರ ಮಾಂಗಲ್ಯ ಪದ್ದತಿಯಲ್ಲಿ ಸ್ಪಷ್ಟವಾಗಿ ಗಂಡ ಹೆಂಡತಿಯ ಸಮ್ಮಿಲನದ ಪ್ರಾಮುಖ್ಯತೆ ಮತ್ತು ಬದುಕಿನ ನಿರ್ವಹಣೆಯ ಬಗ್ಗೆ ಕನ್ನಡದಲ್ಲಿ ಭೋದಿಸಲಾಗುತ್ತದೆ‌. ಇದು ಭವಿಷ್ಯದ ಕೌಟುಂಬಿಕ ಮೌಲ್ಯಗಳ ಉಳಿವಿಗೆ ಸಹಕಾರಿಯಾಗುತ್ತದೆ.

ಗೆಳೆಯ - ಗೆಳತಿಯರೇ, ನಿಮಗೆ ಆಸಕ್ತಿ ಇದ್ದರೆ, ಅವಕಾಶ ಇದ್ದರೆ, ಮನೆಯವರ ಒಪ್ಪಿಗೆ ಇದ್ದರೆ ನಿಜವಾಗಿಯೂ ಮಂತ್ರ ಮಾಂಗಲ್ಯ ಒಂದು ಉತ್ತಮ ವಿವಾಹ ವಿಧಾನ. ಇದರಿಂದಾಗಿ ಉಳಿಯುವ ಹಣವನ್ನು ಇನ್ನೇನಾದರೂ ವೈಯಕ್ತಿಕ ಅಥವಾ ಸಾಮಾಜಿಕ ಅನುಕೂಲಕ್ಕೆ ಬಳಸಬಹುದು. ನೀವು ಸಹ ಇದನ್ನು ಅನುಸರಿಸಿ ಸಮಾಜಕ್ಕೆ ಒಂದು ಮಾದರಿಯಾಗಬಹುದು.

ಆಯ್ಕೆಯ ಸ್ವಾತಂತ್ರ್ಯ ನಿಮ್ಮದು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.

Read More Articles