ರಾಮ ರಾಮ ಶ್ರೀರಾಮ, ಅಯೋದ್ಯಾ ರಾಮ, ದಶರಥ ಪುತ್ರ ಶ್ರೀರಾಮ,ವಾಲ್ಮೀಕಿ ಸೃಷ್ಟಿಯ ರಘು ರಾಮ

ಲೋಕಲವಿವ ವಿಶೇಷ

ರಘುಪತಿ ರಾಘವ ರಾಜಾ ರಾಮ್,
ಪತಿತ ಪಾವನ ಸೀತಾರಾಂ...
ಈಶ್ವರ ಅಲ್ಲಾ ತೇರೇ ನಾಮ್,
ಸಬಕೋ ಸನ್ಮತಿ ದೇ ಭಗವಾನ್‌.....

Your Image Ad

ಶ್ರೀರಾಮ ನವಮಿಯ ಶುಭಾಶಯಗಳನ್ನು ಹೇಳುತ್ತಾ.....
ಶ್ರೀರಾಮ ಎಂದರೆ ಯಾರು ?
ರಾಮ ದೇವರೇ ? ಕಾಲ್ಪನಿಕ ಪಾತ್ರವೇ ? ಪೌರಾಣಿಕವೇ ? ಐತಿಹಾಸಿಕವೇ ?........

Your Image Ad

ರಾಮ ಒಬ್ಬ ದೇವರು, ಆತ ಐತಿಹಾಸಿಕ ವ್ಯಕ್ತಿ. ದಶರಥ - ಕೌಸಲ್ಯರ ಹಿರಿಯ ಪುತ್ರ. ಅಯೋಧ್ಯೆಯಲ್ಲಿ ಜನಿಸಿದನು. ಆತನ ವ್ಯಕ್ತಿತ್ವ ಮತ್ತು ಆಡಳಿತವೇ ಒಂದು ಆದರ್ಶ. ಆತ ಒಬ್ಬ ಮರ್ಯಾದಾ ಪುರುಷೋತ್ತಮ. ದೇಶ ಕಂಡ ಮಹಾನ್ ಚಿಂತಕ ಮಹಾತ್ಮ ಗಾಂಧಿ ಸಹ ರಾಮ ರಾಜ್ಯದ ಕನಸು ಕಂಡವರು. ಆದ್ದರಿಂದ. ರಾಮನ ಹುಟ್ಟಿದ ಊರಿನಲ್ಲಿ ರಾಮ ಮಂದಿರವನ್ನು ಬಾಬರ್ ಉರುಳಿಸಿ ಕಟ್ಟಿಸಿದ್ದ ಮಸೀದಿಯನ್ನು ಮತ್ತೆ ಉರುಳಿಸಿ ಈಗ ಭವ್ಯ ರಾಮ ಮಂದಿರ ನಿರ್ಮಿಸುತ್ತಿರುವುದು ಸ್ವಾಭಿಮಾನಿ ಹಿಂದೂಗಳ ಹೆಮ್ಮೆ ಎಂದು ಸಂತೋಷದಿಂದ ಹಬ್ಬ ಆಚರಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು ಮತ್ತು ಆ ಸ್ವಾತಂತ್ರ್ಯ ನಿಮಗಿದೆ. ನಿಮ್ಮ ಭಕ್ತಿ ನಂಬಿಕೆ ಭಾವನೆಗಳು ನಿಮ್ಮ ಸ್ವಂತ ಚಿಂತನೆಯಿಂದ ರೂಪಗೊಂಡಿರುತ್ತದೆ. ಅದು ನಿಮ್ಮ ಅಭಿಪ್ರಾಯ. ಅದನ್ನು ಗೌರವಿಸುತ್ತಾ...........

ಅದರ ಜೊತೆಗೆ ರಾಮ ಒಬ್ಬ ಕಾಲ್ಪನಿಕ ವ್ಯಕ್ತಿ. ವಾಲ್ಮೀಕಿ ಎಂಬ ಬರಹಗಾರ ಅಂದಿನ ಸಮಗ್ರ ಬದುಕು ಮತ್ತು ಸಾಮಾಜಿಕ ವ್ಯವಸ್ಥೆ ಪ್ರತಿಬಿಂಬಿಸುವ ಕಲ್ಪನಾ ಲೋಕವನ್ನು ಅಕ್ಷರಗಳಲ್ಲಿ ಮೂಡಿಸಿದ್ದಾರೆ. ಅದನ್ನೇ ದೇವರೆಂದು ಭ್ರಮಿಸಲಾಗಿದೆ. ಆ ಭ್ರಮಾಲೋಕದ ನಂಬಿಕೆಯನ್ನೇ ರಾಜಕೀಯಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಪಕ್ಷ ಆಡಳಿತ ನಡೆಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುವುದಕ್ಕೂ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅದರ ಭವ್ಯತೆಯ ವಿಜೃಂಭಣೆ ಬಗ್ಗೆ ಪ್ರಶ್ನೆ ಮಾಡುವವರನ್ನೂ ಪ್ರಶ್ನಿಸಲು ಬಿಡಿ.

ಸನಾತನ ಧರ್ಮ ಇತರ ಧರ್ಮಗಳಂತೆ ತನ್ನದೇ ಶ್ರೇಷ್ಠ ಎಂದು ಹೇಳುವುದಿಲ್ಲ. ಪ್ರಶ್ನಿಸುವುದನ್ನು ಪ್ರೋತ್ಸಾಹಿಸುತ್ತದೆ. ಹಿಂದೂ ಧರ್ಮದ ಮೂಲ ವೇದ ಉಪನಿಷತ್ತು ಸೃಷ್ಟಿಯಾಗಿರುವುದೇ ಪ್ರಶ್ನೆಗಳ ಮೂಲಕವೇ, ಭಗವದ್ಗೀತೆ ರೂಪ ತಳೆದಿರುವುದೇ ಪ್ರಶ್ನೆಗಳ ಮೂಲಕ, ಬೌದ್ಧ, ಜೈನ, ಸಿಖ್ ಧರ್ಮಗಳು ಜನ್ಮ ತಳೆದಿರುವುದೇ ಪ್ರಶ್ನೆಗಳ ಮುಖಾಂತರ, ಬಸವ, ವಿವೇಕಾನಂದ, ರಮಣ ಮಹರ್ಷಿ, ಗಾಂಧಿ, ಅಂಬೇಡ್ಕರ್, ಲೋಹಿಯಾ ಎಲ್ಲರೂ ಪ್ರಶ್ನಿಸುವ ಮುಖಾಂತರವೇ ತಮ್ಮ ಚಿಂತನೆಗಳನ್ನು ಬೆಳೆಸಿಕೊಂಡವರು.

ಪ್ರಶ್ನೆಗಳೇ ಒಂದು ಜೀವಂತ ಸಮಾಜದ, ಅಭಿವೃದ್ಧಿಯ ಪ್ರಗತಿಪರ ದೇಶದ ಮಾನದಂಡಗಳು.
ಭಾವನೆ, ಭಕ್ತಿ, ನಂಬಿಕೆ, ರಾಜಕೀಯ, ಪ್ರಚಾರ ಮುಂತಾದ ಸಮೂಹ ಸನ್ನಿಯಲ್ಲಿ ನಿಮ್ಮ ಸ್ವತಂತ್ರ ಚಿಂತನೆಯನ್ನು ಮರೆಯಬೇಡಿ. ಅದಕ್ಕೂ ಮನದ ಮೂಲೆಯಲ್ಲಿ ಸ್ವಲ್ಪ ಅವಕಾಶ ಇರಲಿ. ಇನ್ನೂ ಕೊರೋನಾ ಮಾರಿ, ಅದರ ಪರಿಣಾಮಗಳ ಭೀಕರತೆ ಸಾಕಷ್ಟು ಪ್ರಮಾಣದಲ್ಲಿ ಹಾನಿ ಮಾಡುತ್ತಿದೆ. ಯಾವ ರಾಮ ಲಕ್ಷ್ಮಣ ಅಲ್ಲಾ ಜೀಸಸ್ ಗಳು ಸರಿಯಾದ ಔಷಧಿ ಕಂಡು ಹಿಡಿದಿಲ್ಲ. ಯಾರೂ ಬೆವರು ಸುರಿಸದೆ ಅಕ್ಕಿ ಗೋದಿ ಬೆಳೆಯಲಾಗುತ್ತಿಲ್ಲ, ಯಾವ ಮಾಧ್ಯಮಗಳು ರಕ್ಷಣೆ ಮಾಡುತ್ತಿಲ್ಲ.

ಆದ್ದರಿಂದ ನಮ್ಮೆಲ್ಲರ ಪ್ರಯತ್ನ ರಾಮ ಮಂದಿರ ನಿರ್ಮಾಣಕ್ಕಿಂತ ರಾಮ ರಾಜ್ಯದ ನಿರ್ಮಾಣಕ್ಕೆ, ಕೆಲವು ವಿಷಯಗಳಲ್ಲಿ ರಾಮನಂತ ಆದರ್ಶ ವ್ಯಕ್ತಿಯ ವ್ಯಕ್ತಿತ್ವ ಹೊಂದಲು ಪ್ರಯತ್ನಿಸಬೇಕಿದೆ. ಮಂದಿರ ಒಂದು ಸಾಂಕೇತಿಕ ಮಾತ್ರ.

ಸರಿಯೋ ತಪ್ಪೋ, ಒಳ್ಳೆಯದೋ ಕೆಟ್ಟದ್ದೋ ಇತಿಹಾಸ ಏನೇ ಇರಲಿ ಈ ದೇಶದಲ್ಲಿ ಈಗಲೂ ಸುಮಾರು 20 ಕೋಟಿ ಮುಸ್ಲಿಂ ಸಮುದಾಯದ ಜನರು ನಮ್ಮ ನಡುವೆ ಭಾರತೀಯ ಪ್ರಜೆಗಳಾಗಿ ಸಮಾನ ಹಕ್ಕು ಮತ್ತು ಕರ್ತವ್ಯಗಳೊಂದಿಗೆ ವಾಸಿಸುತ್ತಿದ್ದಾರೆ. ಅವರ ಭಾವನೆಗಳನ್ನು ಗೌರವಿಸುವುದು ಸಹ ದೇಶದ ಶಾಂತಿ, ಅಭಿವೃದ್ಧಿ ಮತ್ತು ಒಟ್ಟು ಹಿತಾಸಕ್ತಿಯಿಂದ ಮುಖ್ಯ ಎಂಬ ಅರಿವು ಸಹ ಇರಬೇಕು.

ಯಾರು ಏನೇ ಹೇಳಿದರು ಧರ್ಮ ಎಂಬುದು ಒಂದು ಅಫೀಮು. ಧಾರ್ಮಿಕ ಮೂಲಭೂತವಾದ ತುಂಬಾ ಅಪಾಯಕಾರಿ. ದೇವರು ಧರ್ಮದ ಹೆಸರಿನಲ್ಲಿ ಕೆಟ್ಟ ಕೆಲಸ ಮಾಡಲು ತುಂಬಾ ಜನ ಬೇಕಾಗಿಲ್ಲ. ಕೆಲವೇ ನರ ರಾಕ್ಷಸರು ಸಾಕಷ್ಟು ಪ್ರಾಣ ಹಾನಿ ಮಾಡಬಹುದು. ಪರಿಸ್ಥಿತಿಯ ಲಾಭ ಪಡೆಯಲು ದುಷ್ಟ ಜನ ಕಾಯುತ್ತಿರುತ್ತಾರೆ. ಅವರನ್ನು ಪ್ರಚೋದಿಸುವುದು ಕೂಡಾ ನಾವು ಮಾಡಬಹುದಾದ ದೊಡ್ಡ ತಪ್ಪಾಗಬಹುದು. ಎಲ್ಲಾ ಅತಿರೇಕಗಳ ಪರಿಣಾಮ ಅಪಾಯಕಾರಿಯಾಗಬಹುದು ಎಂಬ ಎಚ್ಚರಿಕೆ ಇರಬೇಕು. ಜನರಿಗೆ ಹುಚ್ಚು ಹಿಡಿಸುವುದು ಸುಲಭ. ಅದನ್ನು ನಿಯಂತ್ರಿಸುವುದು ಕಷ್ಟ.

ಜೀವ ಮತ್ತು ಜೀವನ ಮುಖ್ಯ ಎಂಬುದನ್ನು ಸ್ವಾಗತಿಸುತ್ತಾ, ಮಂದಿರ - ಮಸೀದಿ - ಚರ್ಚುಗಳು ಮುಖ್ಯವೇ ಎಂಬುದನ್ನು ಪ್ರಶ್ನಿಸುತ್ತಾ.......

" ಇಲ್ಲಿಯವರೆಗೂ ನಾನು ಪಡೆದ ಅನುಭವ ಮತ್ತು ಅರಿವಿನಿಂದ ನಿಮಗೆ ಸತ್ಯವನ್ನು ಹೇಳುತ್ತಿದ್ದೇನೆ. ಮುಂದೆ ಇದಕ್ಕಿಂತ ಉತ್ತಮ ಸತ್ಯ ನಿಮಗೆ ಅರಿವಾದರೆ ಅದನ್ನು ಅಳವಡಿಸಿಕೊಳ್ಳಿ " ಎಂಬ ಗೌತಮ ಬುದ್ಧನ ಜ್ಞಾನೋದಯದ ಸಂದೇಶವನ್ನು ಒಪ್ಪಿಕೊಳ್ಳುತ್ತಾ........

ರಾಮ ನಾಮ ಜಪಿಸುತ್ತಾ......
ರಾಮ ರಾಮ ಶ್ರೀರಾಮ, ಅಯೋದ್ಯಾ ರಾಮ,
ದಶರಥ ಪುತ್ರ ಶ್ರೀರಾಮ,
ವಾಲ್ಮೀಕಿ ಸೃಷ್ಟಿಯ ರಘು ರಾಮ,

ಮರ್ಯಾದ ಪುರುಷೋತ್ತಮ ರಾಮನೂ ನೀನೆ, ಹೆಂಡತಿಯನ್ನು ಅನುಮಾನದಿಂದ ಕಾಡಿಗಟ್ಟಿದ ನಿರ್ದಯಿಯೂ ನೀನೆ, ಭಕ್ತಿಯಿಂದ ಹಿಂದೂಗಳನ್ನು ಒಂದು ಮಾಡಿದ ದೇವರೂ ನೀನೇ. ಮಂದಿರಕ್ಕಾಗಿ ಭಾರತೀಯರನ್ನು ಬೇರ್ಪಡಿಸುತ್ತಿರುವವನು ನೀನೇ

ಕೆಲವರನ್ನು ಅಧಿಕಾರಕ್ಕೇರಿಸಿದವನೂ ನೀನೇ, ಹಲವರನ್ನು ಅಧಿಕಾರದಿಂದ ಬೀಳಿಸಿದವನೂ ನೀನೇ.

ನೀನೊಂದು ಪಾತ್ರವೋ,
ನೀನೊಂದು ಸೂತ್ರವೋ,
ನೀನೊಂದು ಕಲ್ಪನೆಯೋ,
ನೀನೊಂದು‌ ವಾಸ್ತವವೋ,
ಚರ್ಚೆಗಳು ನಡೆಯುತ್ತಲೇ ಇದೆ,
ನೀನು ಸೃಷ್ಟಿಯಾದ ದಿನದಿಂದಲೂ.

ಯಾರ ಕೈಗೂ ಸಿಗದ ನೀನು,
ಮೂರ್ತಿಯಾದೆ, ಸ್ಪೂರ್ತಿಯಾದೆ,
ವಿವಾದವಾದೆ,
ಕಟಕಟೆಯಲ್ಲಿ ಬಂದಿಯಾದೆ.

ನೀನು ಜೀವಂತ ಇದ್ದೆ ಎನ್ನವವರೊಂದಷ್ಟು, ಇಲ್ಲ ಎನ್ನುವವರೊಂದಷ್ಟು, ನೀನು ಒಳ್ಳೆಯವನು ಎನ್ನವವರೊಂದಷ್ಟು, ಕೆಟ್ಟವನು ಎನ್ನುವವರೊಂದಷ್ಟು

ಒಟ್ಟಿನಲ್ಲಿ, ನಿನ್ನ ನಾಮವೇ, ಈ ಬಿರು ಬೇಸಿಗೆಯಲ್ಲಿ, ಕೋಸಂಬರಿ - ಬೆಲ್ಲದ ಪಾನಕಕ್ಕೆ ನೆಪವಾಗಿದೆ. ನನಗದಷ್ಟೇ ಲಾಭ.

ಏನಾದರಾಗಲಿ, ಒಳ್ಳೆಯದನ್ನು ಸ್ವೀಕರಿಸೋಣ, ಕೆಟ್ಟದ್ದನ್ನು ತಿರಸ್ಕರಿಸೋಣ, ರಾಮನೋ ಲಕ್ಷ್ಮಣನೋ ಸೀತೆಯೋ, ರಾವಣನೋ ಹನುಮಂತನೋ ಶೋರ್ಪನಖಿಯೋ, ವಾಲಿಯೋ, ಸುಗ್ರೀವನೋ, ಯಾರಾದರಾಗಲಿ ನಮಗೇನು. ಶಾಂತಿ ನೆಮ್ಮದಿ ನಾಗರಿಕ ಪ್ರಜ್ಞೆ ಮುಖ್ಯವಷ್ಟೆ. ಅಂಧ ಭಕ್ತಿಯೂ ಬೇಡ. ಒಣ ದ್ವೇಷವೂ ಬೇಡ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ. ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ - ಮನೆಗಳಲ್ಲಿ ಮತಗಳಲ್ಲಿ ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ. ವಿವೇಕಾನಂದ. ಹೆಚ್.ಕೆ.

Read More Articles