
ಶೀಘ್ರವೇ ಅಂಗನವಾಡಿ ಶಿಕ್ಷಕಿಯರ ನೇಮಕ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
- shivaraj B
- 19 Jul 2024 , 7:13 AM
- Bengaluru
- 8153
ಬೆಂಗಳೂರು : ಶೀಘ್ರವೇ ಅಂಗನವಾಡಿ ಶಿಕ್ಷಕಿಯರ ನೇಮಕಾತಿ ಪ್ರತಿಕ್ರಿಯೆ ನಡೆಯಲಿದೆ. ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಕರೆದಿದ್ದು, ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಒಳಗೊಂಡ ಜಿಲ್ಲಾ ಮಟ್ಟದ ಸಮಿತಿಯಲ್ಲಿ ನೇಮಕಾತಿ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ವಿಧಾನ ಪರಿಷತ್ ಕಲಾಪದಲ್ಲಿ ಶುಕ್ರವಾರ ನಡೆದ ಪ್ರಶ್ನೋತ್ತರ ವೇಳೆ ಸದಸ್ಯ ಕೆ.ಅಬ್ದುಲ್ ಜಬ್ಬರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅದಷ್ಟು ಬೇಗ ಅಂಗನವಾಡಿ ಶಿಕ್ಷಕಿಯರ ನೇಮಕಾತಿ ನಡೆಯಲಿದೆ ಎಂದರು.

ಅಂಗನವಾಡಿಯ ಮೂಲ ಉದ್ದೇಶ, ಉತ್ತಮ ಶಿಕ್ಷಣದ ಜೊತೆಗೆ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದು. ಮುಖ್ಯಮಂತ್ರಿಗಳು ಈಗಾಗಲೇ ಮೌಕಿಕವಾಗಿ ಆದೇಶ ನೀಡಿದ್ದು, ಇದೇ 22 ರಿಂದ ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ತರಗತಿಗಳನ್ನು ಆರಂಭಿಸಲಾಗುತ್ತಿದ್ದು, ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣ ಮಾಡಲಾಗುವುದು ಎಂದರು.