ಬೆಳೆ ವಿಮೆ ಯೋಜನೆಯಿಂದ ಖಾಸಗಿ ಕಂಪನಿಗೆ ಲಾಭ: ಈಶ್ವರ ಖಂಡ್ರೆ

ಬೆಳಗಾವಿ : ಕೇಂದ್ರ ಸರ್ಕಾರ 2016-17ರಲ್ಲಿ ಜಾರಿಗೆ ತಂದ ಬೆಳೆ ವಿಮೆ ಯೋಜನೆಯಿಂದ ಖಾಸಗಿ ವಿಮಾ ಕಂಪನಿಗಳಿಗೆ ಲಾಭ ಆಗುತ್ತಿದೆ. 2016ರಿಂದ 2024ರವರೆಗೆ ಖಾಸಗಿ ಕಂಪನಿಗಳು ಸಾವಿರಾರು ಕೋಟಿ ರೂಪಾಯಿ ಲಾಭ ಮಾಡಿವೆ. ಇದರಿಂದ ರೈತರಿಗೆ ಅನುಕೂಲ ಆಗುತ್ತಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮೇಲ್ಮನೆಗಿಂದು ತಿಳಿಸಿದ್ದಾರೆ.

promotions

ವಿಧಾನಪರಿಷತ್ತಿನಲ್ಲಿಂದು ಉತ್ತರ ಕರ್ನಾಟಕದ ಚರ್ಚೆಯ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಮಳೆ, ಪ್ರವಾಹದಿಂದ ಬೆಳೆ ಹಾನಿ ಆದಾಗ 3 ದಿನಗಳ ಒಳಗಾಗಿ ವೆಬ್ ಲಿಂಕ್ ಅಥವಾ ದೂರವಾಣಿ ಮುಖಾಂತರ ಮಾಹಿತಿ ನೀಡಬೇಕು ಎಂಬ ಷರತ್ತಿದೆ. ಆದರೆ ಖಾಸಗಿ ಕಂಪನಿಗಳ ಫೋನ್ ಮತ್ತು ವೆಬ್ ಲಿಂಕ್ ಕಾರ್ಯ ನಿರ್ವಹಿಸುವುದಿಲ್ಲ. ಬೆಳೆ ಹಾನಿಯಾದವರು ಮಾಹಿತಿ ನೀಡಿಲ್ಲ ಎಂದು ಪರಿಹಾರ ನೀಡುವುದಿಲ್ಲ. ಇಂತಹ ಸಾಕಷ್ಟು ನ್ಯೂನತೆಗಳಿವೆ ಎಂದರು.

promotions

ಬೆಳೆ ಕಟಾವು ಪ್ರಯೋಗದಲ್ಲಿ 7 ವರ್ಷದ ಅಂದಾಜಿನಲ್ಲಿ 5 ವರ್ಷದ ಇಳುವರಿಯ ಸರಾಸರಿ ತೆಗೆದುಕೊಳ್ಳುವ ವಿಚಾರದಲ್ಲೂ ವೈಜ್ಞಾನಿಕವಾಗಿ ನಿಗದಿ ಮಾಡುವುದಿಲ್ಲ ಮತ್ತು ಋತುಮಾನದ ಮಧ್ಯಕಾಲೀನ ವೈಪರೀತ್ಯ (ಮಿಡ್ ಸೀಸನ್ ಅಡ್ವರ್ಸಿಟಿ) ವಿಚಾರದಲ್ಲೂ ರೈತರಿಗೆ ಅನ್ಯಾಯ ಆಗುತ್ತಿದೆ. ಇಂತಹ ನ್ಯೂನತೆಗಳು ಇವೆ. ಒಟ್ಟಾರೆ ಬೆಳೆ ವಿಮೆ ನೀತಿ ಬದಲಾವಣೆ ಆದರೆ ಮಾತ್ರ ರೈತರಿಗೆ ಒಳ್ಳೆಯದಾಗುತ್ತದೆ. ಇದಕ್ಕೆ ಎಲ್ಲರೂ ಕೂಡಿ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು. 

ಕೇಂದ್ರ ಸರ್ಕಾರ ಬೆಳೆ ವಿಮೆ ಯೋಜನೆಗೆ ಮಾಡಿರುವ ಮಾರ್ಗಸೂಚಿಗಳಲ್ಲಿ ಸಾಕಷ್ಟು ನ್ಯೂನತೆ ಇದೆ. ಇದನ್ನು ಪರಿಹರಿಸಲು ಕೃಷಿ ಸಚಿವರು ಸಭೆ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರ, ಆದರೆ ಈವರೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗೆ ಬದಲಾವಣೆ ಮಾಡಿಲ್ಲ ಎಂದರು.

ಕೇಂದ್ರ ಸರ್ಕಾರ 5-10 ಖಾಸಗಿ ವಿಮಾ ಕಂಪನಿಗಳನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದು ಅವರೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಅವರು ರಾಜ್ಯದ 31 ಜಿಲ್ಲೆಗಳನ್ನು ಹಂಚಿಕೊಂಡು ತಮಗೆ ಲಾಭವಾಗುವ ರೀತಿಯಲ್ಲಿ ಟೆಂಡರು ಹಾಕಿ ಲಾಭ ಮಾಡಿಕೊಳ್ಳುತ್ತಿದ್ದಾರೆ.

2016ಕ್ಕೆ ಮುನ್ನ ಭಾರತೀಯ ಕೃಷಿ ನಿಗಮದ ವತಿಯಿಂದ ವಿಮೆ ಜಾರಿ ಮಾಡುತ್ತಿದ್ದರು, ಆಗ ನಿಗಮಕ್ಕೆ ನಷ್ಟ ಆಗುತ್ತಿತ್ತು. ಆ ನಷ್ಟವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಭರಿಸುತ್ತಿತ್ತು. ಈಗಲೂ ನಿಗಮಕ್ಕೆ ನಷ್ಟ ಆಗುತ್ತದೆ ಆದರೆ ಖಾಸಗಿ ಕಂಪನಿಗಳಿಗೆ ಮಾತ್ರ ಲಾಭ ಆಗುತ್ತಿದೆ. ಹೀಗಾಗಿ ಇಡೀ ನೀತಿಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. 

Read More Articles