ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು: ಪೊಲೀಸ್ ಆಯುಕ್ತ ಎನ್. ಶಶಿಕುಮಾರ್
- shivaraj B
- 13 Sep 2024 , 6:43 PM
- Belagavi
- 466
ಧಾರವಾಡ: ಎಲ್ಲರಿಗೂ ಶಿಕ್ಷಣ, ಸಮಾನ ಅವಕಾಶಗಳು ಸೀಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೋರಾಡಬೇಕಿದೆ ಎಂದು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕರೆ ನೀಡಿದರು.
ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮದಲ್ಲಿ ಸೆ. ೧೨ ರಂದು (ಗುರುವಾರ ಸಂಜೆ) ಶ್ರೀ ಈಶ್ವರ ಯುವಕ ಮಂಡಳದಿಂದ ಆಯೋಜಿಸಲಾಗಿದ್ದ 10ನೇ ವರ್ಷದ ಗಣೇಶೋತ್ಸವ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮದ ಎಲ್ಲರೂ ಒಗ್ಗಟ್ಟಿನಿಂದ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಇಂದು ನಡೆದ ಈ ಕಾರ್ಯಕ್ರಮ ಇತರರಿಗೂ ಮಾದರಿಯಾಗಿದೆ. ಸುತ್ತಮುತ್ತಲಿನ ಹತ್ತೂರು ಗ್ರಾಮದ ಜನರು ಸೇರಿಕೊಂಡು ಇಂತಹ ಸುಂದರ ಕಾರ್ಯಕ್ರಮ ಮಾಡಬೇಕು. ಈ ರೀತಿ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ಇಡೀ ಗ್ರಾಮದ ನಾವೆಲ್ಲರೂ ಒಂದೇ ಎಂಬ ಅಭಿಪ್ರಾಯ ಮೂಡುತ್ತದೆ ಎಂದು ತಿಳಿಸಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿ ಭರಮಣಿ ಮಾತನಾಡಿ, ಗೊಂದಲ ಇಲ್ಲದೇ ಶಾಂತಿಯುತವಾಗಿ ಗಣಪತಿ ಹಬ್ಬ ಆಚರಣೆ ಮಾಡಬೇಕು. ಇಂದಿನ ದಿನಗಳಲ್ಲಿ ದೊಡ್ಡವರು, ಚಿಕ್ಕವರು, ಮಹಿಳೆಯರು ಒಟ್ಟಿಗೆ ಸೇರಿ ಹಬ್ಬ ಆಚರಣೆ ಮಾಡುವುದು ತುಂಬಾ ವಿರಳ. ಆದರೆ, ಗುಳೇದಕೊಪ್ಪ ಗ್ರಾಮದಲ್ಲಿ ಇಂತಹ ಕಾರ್ಯಕ್ರಮ ಆಯೋಜನೆಯಾಗಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಈ ಗ್ರಾಮ ಇತರೆ ಹಳ್ಳಿಗಳಿಗೆ ಆದರ್ಶ ಗ್ರಾಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗುಳೇದಕೊಪ್ಪ ಗ್ರಾಮದ ಮಾಜಿ ಸೈನಿಕರಿಗೆ ಹಾಗೂ ವಿವಿಧೆಡೆ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವ ಶಿಕ್ಷಕ-ಶಿಕ್ಷಕಿಯರಿಗೆ ಸನ್ಮಾನಿಸಲಾಯಿತು.
ಈ ವೇಳೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಆಯಕ್ತ ಈಶ್ವರ ಉಳ್ಳಾಗಡ್ಡಿ, ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಎಂಡಿ ರುದ್ರೇಶ ಘಾಳಿ, ತಾ.ಪಂ ಮಾಜಿ ಉಪಾಧ್ಯಕ್ಷ ಶಿವಾಜಿ ಜಾಧವ, ಎಪಿಎಂಸಿ ಮಾಜಿ ಅಧ್ಯಕ್ಷ ವಿಠ್ಠಲ ಪಿರಗಾರ, ನಿವೃತ್ತ ಬಿಇಒ ಬಸವರಾಜ ಭೋಸಲೆ ಸೇರಿದಂತೆ ಗುಳೇದಕೊಪ್ಪ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಊರಿನ ಮುಖಂಡರು ಭಾಗಿಯಾಗಿದ್ದರು. ಈಶ್ವರ ಹಳ್ಳಿಗೇರಿ ಕಾರ್ಯಕ್ರಮ ನಿರೂಪಣೆ ಮಾಡಿಕೊಟ್ಟರು.