
ಎಇ-ಜೆಇ ಕನ್ನಡ ಪರೀಕ್ಷೆ ಹೊಸದಾಗಿ ನಡೆಸಲು ಹೈಕೋರ್ಟ್ ಸೂಚನೆ
ಬೆಂಗಳೂರು: ಕಳೆದ 2017ರ ಆಗಸ್ಟ್ನಲ್ಲಿಅಧಿಸೂಚನೆ ಹೊರಡಿಸಲಾಗಿರುವ ಸಹಾಯಕ ಎಂಜಿನಿಯರ್ (ಎಇ) ಮತ್ತು ಕಿರಿಯ ಎಂಜಿನಿಯರ್ (ಜೆಇ) ನೇಮಕ ಸಂಬoಧ 2024ರ ಫೆಬ್ರವರಿಯಲ್ಲಿ ನಡೆಸಲಾಗಿದ್ದ ಕನ್ನಡ ಪರೀಕ್ಷೆಯನ್ನು ಹೊಸದಾಗಿ ನಡೆಸುವಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್)ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ವಿಜಯಪುರ ಜಿಲ್ಲೆಯ ಚಡಚಣದ ವಾಸಿ, ಜೆಇ ಹುದ್ದೆಯ ಆಕಾಂಕ್ಷಿ ಗೀತಾ ಚವ್ಹಾಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ. ಅಲ್ಲದೇ, ಕೆಪಿಸಿಎಲ್ ಕನ್ನಡ ಭಾಷಾ ಪರೀಕ್ಷೆ ಮುಕ್ತಾಯಗೊಂಡ ನಂತರ ಕನಿಷ್ಠ ಅಂಕಗಳನ್ನು ನಿಗದಿ ಮಾಡಿದೆ, ಇದು ಕಾನೂನು ಬಾಹಿರ ಕ್ರಿಯೆಯಾಗಿದೆ.

ಜತೆಗೆ ನಿಯಮದಲ್ಲೂ ಅದಕ್ಕೆ ಅವಕಾಶವಿಲ್ಲ. ಹಾಗಾಗಿ ಕೆಪಿಸಿಎಲ್ ಕ್ರಮ ಒಪ್ಪಲಾಗದು ಎಂದು ಪೀಠ ಹೇಳಿದೆ. ಕೆಪಿಸಿಎಲ್‌ನ ವೃಂದ ಮತ್ತು ನೇಮಕ ನಿಯಮಗಳಲ್ಲಿಕನ್ನಡ ಪರೀಕ್ಷೆಗೆ 100 ಅಂಕಗಳನ್ನು ಮಾತ್ರ ನಿಗದಿಪಡಿಸಬೇಕು ಎಂದು ಹೇಳಲಾಗಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ, ಅದರಂತೆ ನಿಗಮ ಹೊಸದಾಗಿ ಕನ್ನಡ ಪರೀಕ್ಷೆಯನ್ನು 100 ಅಂಕಗಳಿಗೆ ಮಾತ್ರ ನಡೆಸಬೇಕು. ಆ ನೂರು ಅಂಕಗಳಿಗೆ ಕನಿಷ್ಠ ಅಂಕಗಳೆಷ್ಟು ಎಂಬುದನ್ನು ಪರೀಕ್ಷೆಗೆ ಮೊದಲೇ ನಿಗದಿಪಡಿಸಬೇಕು ಎಂದು ಪೀಠ ಆದೇಶಿಸಿದೆ. ಅಲ್ಲದೇ, ನಿಗಮ ನೇಮಕ ಪರೀಕ್ಷೆಗಳನ್ನು ನಡೆಸುತ್ತಿರುವುದು ತಾಂತ್ರಿಕ ಹುದ್ದೆಗಳಿಗೆ, ಹಾಗಾಗಿ ಅದಕ್ಕೆ ಯಾವುದೇ ರೀತಿಯಲ್ಲೂ ಕನ್ನಡ ಭಾಷೆ ಅಡ್ಡಿಯಾಗುವುದಿಲ್ಲ ಎಂದೂ ಸಹ ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ:ಕೆಪಿಸಿಎಲ್ 2017ರ ಆ.3ರಂದು ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟಿçಕಲ್ ಎಇ ಮತ್ತು ಜೆಇ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಅದಕ್ಕಾಗಿ ತಾಂತ್ರಿಕ ಪತ್ರಿಕೆ ಹಾಗೂ ಕನ್ನಡ ಪತ್ರಿಕೆ ಎರಡನ್ನೂ ಸಹ 2018ರ ಜನವರಿಯಲ್ಲಿ ನಡೆಸಲಾಗಿತ್ತು. ಆ ಕನ್ನಡ ಪರೀಕ್ಷೆಯಲ್ಲಿ ಅರ್ಜಿದಾರರು 71 ಅಂಕಗಳನ್ನು ಪಡೆದಿದ್ದರು. ಆದರೆ, ಕೆಪಿಸಿಎಲ್ 2018ರಲ್ಲಿ ನಡೆಸಿದ ಎಲ್ಲ ಪರೀಕ್ಷೆಗಳನ್ನು ರದ್ದುಗೊಳಿಸಿ ಹೊಸದಾಗಿ ನೇಮಕಾತಿ ಪರೀಕ್ಷೆಗಳನ್ನು ನಡೆಸುವ ಹೊಣೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಗೆ ವಹಿಸಿತ್ತು.