
ಹೊಸ ವರ್ಷದ ಸಂಭ್ರಮಕ್ಕೆ ಟ್ಯಾಟೂ ಆರ್ಟಿಸ್ಟ್ ಸಂಗ್ರಹಿಸಿಟ್ಟಿದ್ದ ಮಾದಕ ವಸ್ತುಗಳ ಮೌಲ್ಯ ಕೇಳಿ ದಂಗಾದ ಕರ್ನಾಟಕ ಪೊಲೀಸರು!
ಬೆಂಗಳೂರು: ಹೊಸ ವರ್ಷದ ಸಂಭ್ರಮಕ್ಕಾಗಿ ಮಾದಕ ವಸ್ತುಗಳನ್ನು ಸಂಗ್ರಹಿಸುತ್ತಿದ್ದ ದಾವಣಗೆರೆ ಮೂಲದ ರಕ್ಷಿತ್ ಆರ್.ಎಂ (30) ಎಂಬ ವ್ಯಕ್ತಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚೊಕ್ಕನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ 2.50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ರಕ್ಷಿತ್ ಸಂಗ್ರಹಿಸಿಟ್ಟಿದ್ದ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ಬಂಧಿತನಿಂದ ವಶಪಡಿಸಿಕೊಂಡ ವಸ್ತುಗಳು:

•3.55 ಕೆಜಿ ಹೈಡ್ರೋ ಗಾಂಜಾ
•16.65 ಕೆಜಿ ಗಾಂಜಾ
•40 ಎಲ್‌ಎಸ್‌ಡಿ ಸ್ಟ್ರಿಪ್ಸ್
•130 ಗ್ರಾಂ ಚರಸ್
•2.3 ಗ್ರಾಂ ಎಂಡಿಎಎ ಕ್ರಿಸ್ಟಲ್
•1.30 ಲಕ್ಷ ನಗದು
ಬಂಧಿತನು ಟ್ಯಾಟೂ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದು, ಗೋವಾ, ಥೈಲ್ಯಾಂಡ್, ಹಿಮಾಚಲ ಪ್ರದೇಶ ಮತ್ತು ಆಂಧ್ರಪ್ರದೇಶದಿಂದ ಮಾದಕ ವಸ್ತುಗಳನ್ನು ತರಿಸಿಕೊಂಡು ಸಂಗ್ರಹಿಸಿಟ್ಟಿದ್ದ.ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು,ಆತನ ಪತ್ತೆ ಕಾರ್ಯ ನಡೆಯುತ್ತಿದೆ.
ಇತರ ಕಾರ್ಯಾಚರಣೆ:ಬೆಂಗಳೂರಿನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಒಟ್ಟು 11 ಜನರನ್ನು ಬಂಧಿಸಿ,13 ಲಕ್ಷ ಮೌಲ್ಯದ ಗಾಂಜಾ ಮತ್ತು 6 ಆರೋಪಿಗಳಿಂದ 12.70 ಲಕ್ಷ ಮೌಲ್ಯದ ಎಂಡಿಎಎ ವಶಪಡಿಸಿಕೊಂಡಿದ್ದಾರೆ.