
ಎಂಎಲ್ಸಿ ಸಿ.ಟಿ. ರವಿ ಷರತ್ತುಬದ್ಧ ಜಾಮೀನು ಮೇಲೆ ಬಿಡುಗಡೆ
ಬೆಂಗಳೂರು: ಬೆಳಗಾವಿ ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯಪದಗಳನ್ನು ಬಳಸಿ ನಿಂದಿಸಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಬಿಜೆಪಿ ಎಂಎಲ್ಸಿ ಸಿ.ಟಿ. ರವಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಸಿ.ಟಿ. ರವಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ, ತನಿಖೆಗೆ ಸಹಕರಿಸುವ ಷರತ್ತಿನ ಮೇಲೆ ಸಿ.ಟಿ. ರವಿಯ ಬಿಡುಗಡೆಗೆ ಆದೇಶ ನೀಡಿದರು.

ವಕೀಲರ ವಾದಗಳು:
ಸಿಟಿ ರವಿ ಪರ ವಕೀಲ ಸಂದೇಶ್ ಚೌಟ, “ಬಂಧನ ಕಾನೂನು ಬಾಹಿರವಾಗಿದೆ. 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯ ಪ್ರಕರಣಗಳಲ್ಲಿ 41ಎ ಅಡಿ ನೋಟಿಸ್ ನೀಡಬೇಕಾಗಿತ್ತು. ಆದರೆ, ಪೊಲೀಸರು ಈ ಪ್ರಕ್ರಿಯೆ ಪಾಲಿಸಿಲ್ಲ,” ಎಂದು ವಾದಿಸಿದರು.
ಎದುರಿನ ವಕೀಲ ಎಸ್‌ಪಿಪಿ ಬೆಳ್ಳಿಯಪ್ಪ, “ಆರೋಪಿ ಶಾಸಕರಾಗಿ ತನ್ನ ಪ್ರಭಾವ ಬಳಸುವ ಸಾಧ್ಯತೆ ಇದೆ. ಹೀಗಾಗಿ ಬಂಧನ ಅನಿವಾರ್ಯವಾಗಿತ್ತು,” ಎಂದು ವಾದಿಸಿದರು.
ಬಂಧನದ ಮೊದಲು 41ಎ ಅಡಿ ನೋಟಿಸ್ ನೀಡುವುದು ಕಾನೂನಾತ್ಮಕವಾಗಿದೆ. ಈ ನೋಟಿಸ್ ನೀಡದಿರುವುದಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸಲಾಗಿಲ್ಲ. ಹೀಗಾಗಿ ಆರೋಪಿ ಸಿ.ಟಿ. ರವಿಯನ್ನ ತಕ್ಷಣವೇ ಷರತ್ತುಬದ್ಧವಾಗಿ ಬಿಡುಗಡೆ ಮಾಡಲಾಗುವುದು,ಎಂದು ನ್ಯಾಯಮೂರ್ತಿ ಎಂ.ಜಿ. ಉಮಾ ಆದೇಶಿಸಿದರು.
ಸುವರ್ಣ ಸೌಧದಲ್ಲಿ ನಡೆದ ಘಟನೆ ಸಂಬಂಧ ಸಿ.ಟಿ. ರವಿ ವಿರುದ್ಧದ ಪ್ರಕರಣದ ಬೆನ್ನಲ್ಲೇ ಹೈಕೋರ್ಟ್ ನೀಡಿದ ಈ ಆದೇಶ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.