
ಎಲ್‌ಎಲ್‌ಬಿ ಶಿಕ್ಷಣಕ್ಕೆ ಪಿಯುಸಿ ಅಂಕಪಟ್ಟಿ ಬೇಡ : ಹೈಕೋರ್ಟ್
ಬೆಂಗಳೂರು: ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮ 5ರ ಪ್ರಕಾರ ಮೂರು ವರ್ಷದ ಕಾನೂನು ಪದವಿಗೆ (ಎಲ್‌ಎಲ್‌ಬಿ) ನೋಂದಣಿಯಾಗಲು ಮೂರು ವರ್ಷದ ಯಾವುದೇ ಪದವಿ ಪ್ರಮಾಣ ಪತ್ರ ಹೊಂದಿದ್ದಲ್ಲಿ, ಪಿಯುಸಿ ಉತ್ತೀರ್ಣರಾದ ಪ್ರಮಾಣಪತ್ರದ ಅಗತ್ಯತೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಉದ್ಯೋಗ ಆಧಾರಿತ ಪದವಿಪೂರ್ವ ಶಿಕ್ಷಣ (ಜೆಒಸಿ) ಪಡೆದಿದ್ದ ಕಾರಣದಿಂದ ಕಾನೂನು ಪದವಿ ಅಧ್ಯಯನಕ್ಕೆ ಅವಕಾಶ ನೀಡದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕ್ರಮ ಪ್ರಶ್ನಿಸಿ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರಾಕೇಶ್ ಶೆಟ್ಟಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಬಾರ್ ಕೌನ್ಸಿಲ್ ನಿಯಮ 5(ಎ) ಪ್ರಕಾರ 3 ವರ್ಷದ ಕಾನೂನು ಪದವಿಗೆ ನೋಂದಣಿ ಆಗಬೇಕಾದರೆ ಪದವಿ ಪ್ರಮಾಣಪತ್ರವನ್ನು ನೀಡಿದ್ದರೆ, ಪಿಯುಸಿ (ತತ್ಸಮಾನ) ಪ್ರಮಾಣದ ಅಗತ್ಯತೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೂ, ಐದು ವರ್ಷದ ಕಾನೂನು ಪದವಿಗೆ ಅರ್ಜಿ ಸಲ್ಲಿಸಿದಾಗ ಎಸ್‌ಎಸ್‌ಎಲ್‌ಸಿ ಪಾಸಾದ ಬಳಿಕ ಎರಡು ವರ್ಷ ಸಿಬಿಎಸ್‌ಸಿ ಅಥವಾ ಐಸಿಎಸ್‌ಇ ಅಥವಾ ದ್ವಿತೀಯ ಪಿಯುಸಿ ಅಧ್ಯಯನ ಅವಶ್ಯವಾಗಿರಲಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ರಾಕೇಶ್ ಶೆಟ್ಟಿ 1999ರಲ್ಲಿ ಕಂಪ್ಯೂಟರ್ ತಂತ್ರಾಶಗಳಲ್ಲಿ ಉದ್ಯೋಗ ಆಧಾರಿತ ಪದವಿ ಪೂರ್ವ ಶಿಕ್ಷಣ (ಜೆಒಸಿ) ಅಧ್ಯಯನ ಮಾಡಿದ್ದರು. ಬಳಿಕ 2008ರಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ (ಬಿಕಾಂ) ಪೂರ್ಣಗೊಳಿಸಿದ್ದರು.ಹಲವು ವರ್ಷಗಳ ಕಾಲ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿದ ಬಳಿಕ 2024ರಲ್ಲಿ ಕಾನೂನು ಪದವಿ ಪಡೆಯಲು ಬೆಂಗಳೂರಿನ ಸೌಂದರ್ಯ ಕಾನೂನು ಕಾಲೇಜಿನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಜೊತೆಗೆ, 2024-25ರ ಸಾಲಿಗೆ ಶುಲ್ಕ ಪಾವತಿ ಮಾಡಿದ್ದರು.