
ಸಂಕ್ರಾಂತಿ ಹಬ್ಬಕ್ಕೆ ಕಬ್ಬಿನ ದರ ದುಬಾರಿ: ಖರೀದಿ ಮಾತ್ರ ಜೋರು
ಬೆಂಗಳೂರು:ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಕರಿ ಕಬ್ಬಿನ ದರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಈ ಬಾರಿಯೂ ದರ ತುಸು ಹೆಚ್ಚಿದೆ. ಆದರೂ ಗ್ರಾಹಕರು ಹಬ್ಬಕ್ಕಾಗಿ ಕಬ್ಬನ್ನು ಖರೀದಿಸುತ್ತಿದ್ದಾರೆ. ಹಬ್ಬಕ್ಕೆ ಕಬ್ಬು ಬೇಕಾಗಿರುವ ಕಾರಣ ದರ ಎಷ್ಟಾದರೂ ತೆಗೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನಾದ್ಯoತ ಈಗಾಗಲೇ ಮಾರುಕಟ್ಟೆಗೆ ಕಬ್ಬು ಬಂದಿದ್ದು, ತಂಡೋಪತoಡವಾಗಿ ಎಳ್ಳು, ಬೆಲ್ಲ ಜತೆ ಕಬ್ಬನ್ನು ಖರೀದಿ ಮಾಡುತ್ತಿದ್ದಾರೆ.

ಬೆಂಗಳೂರಿನ ಕೆ.ಆರ್.ಪುರಂ, ಮಲ್ಲೇಶ್ವರಂ, ವಿಜಯನಗರ, ಕೆ.ರ್.ಮಾರುಕಟ್ಟೆ ಸೇರಿದಂತೆ ಇತರೆಡೆ ಮಾರುಕಟ್ಟೆಯಲ್ಲಿ ಕರಿ ಕಬ್ಬು ಈಗಾಗಲೇ ಆಗಮಿಸಿದೆ. ನೆರೆಯ ತಮಿಳುನಾಡು ಹಾಗೂ ಮಂಡ್ಯದಲ್ಲಿ ಮಾತ್ರ ಈ ಕಬ್ಬು ಸಿಗಲಿದ್ದು, ಬೆಂಗಳೂರು ಸುತ್ತಮುತ್ತಲಿನ ಭಾಗದ ರೈತರು ಈಗಾಗಲೇ ನಗರಕ್ಕೆ ಆಗಮಿಸಿದ್ದು, ಕಬ್ಬನ್ನು ವಿವಿಧ ರೀತಿಯಲ್ಲಿ ಅಲಂಕರಿಸಿ ಸಂಕ್ರಾಂತಿ ಬಂತು ಎಂದು ತೋರಿಸುತ್ತಿದ್ದಾರೆ.

ಇನ್ನು ಸಂಕ್ರಾಂತಿ ಹಬ್ಬಕ್ಕೆ ಕಬ್ಬುಗಳು ಬೇಡಿಕೆ ಇರುವ ಕಾರಣ ಸುತ್ತಮುತ್ತ ಜಿಲ್ಲೆಯ ಬೆಂಗಳೂರು, ಮೈಸೂರು, ರಾಮನಗರ ಹೀಗೆ ನೆರೆಯ ಹಲವು ಜಿಲ್ಲೆಗಳಿಗೆ ಕಬ್ಬು ಮಾರಾಟವಾಗುತ್ತಿದೆ. ಅಲ್ಲದೇ ಗುಜರಾತ್‌ಗೂ ರವಾನಿಸಲಾಗುತ್ತದೆ. ಈ ಬಾರಿ ಕಬ್ಬಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ರೈತ ಬಸವರಾಜಪ್ಪ ಹೇಳುತ್ತಾರೆ.
ಕಬ್ಬಿನ ದರ ಏಕೆ ಹೆಚ್ಚಳ
ಈ ಬಾರಿ ಮಳೆ ಸೇರಿದಂತೆ ವಿವಿಧ ಕಾರಣಗಳಿಂದ ಕಬ್ಬಿನ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿದೆ. ಸಾಗಣೆ ದರವೂ ಹೆಚ್ಚಾಗಿರುವ ಕಾರಣ ನಿರೀಕ್ಷೆಯಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಕಬ್ಬಿನ ಬೆಲೆ ಗಗನಕ್ಕೇರಿದೆ.
ಹೀಗಾಗಿ ಕಬ್ಬಿನ ಬೆಲೆ ಏರಿಕೆಯಾಗಿರುವುದು ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ. ಆದರೆ ಗ್ರಾಹಕರಿಗೂ ಹಬ್ಬದಲ್ಲಿ ಹೆಚ್ಚಿನ ಹೊರೆಯಾಗದಂತೆ ವ್ಯಾಪಾರ ಮಾಡಬೇಕಿದೆ ಎಂದು ರೈತರು ಹೇಳುತ್ತಿದ್ದಾರೆ.
ಈ ಬಾರಿ ಕಬ್ಬಿಗೆ ಹೆಚ್ಚು ಬೇಡಿಕೆ:ಈ ಬಾರಿ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿರುವ ಕಾರಣ ಬೆಳೆ ಬೆಳೆದ ರೈತನಲ್ಲಿ ಹೆಚ್ಚು ಹಣ ಓಡಾಡುತ್ತಿದೆ. ಆದ್ದರಿಂದ ಹಬ್ಬವನ್ನು ಎಲ್ಲರೂ ಕಳೆದ ಬಾರಿಗಿಂತ ಈ ಬಾರಿ ಸಂಭ್ರಮದಿoದ ಆಚರಿಸಲು ನಿರ್ಧಾರ ಮಾಡಿದ್ದಾರೆ. ಆದ್ದರಿಂದ ನೆಂಟರಿಷ್ಟರ ಮನೆಗೆ ಹೋಗಿ ಎಳ್ಳು ಬೆಲ್ಲ ಕೊಡುವ ಜತೆ ಕಬ್ಬನ್ನು ಕೊಡಬೇಕಿರುವ ಕಾರಣ ಹೆಚ್ಚಿನವರು ದರ ಹೆಚ್ಚಿದರೂ ಹೆಚ್ಚಿನ ಕಬ್ಬನ್ನು ಖರೀದಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ಕಬ್ಬಿಗೆ ಬೇಡಿಕೆ ಹೆಚ್ಚಾಗಿದೆ.
ಎಷ್ಟು ದರ ?:ಈ ಬಾರಿ ಮಾರುಕಟ್ಟೆಯಲ್ಲಿ ಒಂದು ಕೋಲಿನ ಕಬ್ಬಿನ ಬೆಲೆ 100 ರೂಪಾಯಿಗೆ ತಲುಪಿದೆ. ಕೆಲವು ರೈತರು ತೋಟದಲ್ಲೇ ವ್ಯಾಪಾರಿಗಳಿಗೆ ಕಬ್ಬು ಮಾರಾಟ ಮಾಡಿದ್ದರೆ, ಇನ್ನೂ ರೈತರು ತಾವೇ ಮಾರುಕಟ್ಟೆಗೆ ತಂದು ಮಾರುತ್ತಿದ್ದಾರೆ. ಜನವರಿ 10 ರಿಂದ 14 ರೊಳಗೆ ಉತ್ತಮ ವ್ಯಾಪಾರ ಆಗುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ 10 ಕಬ್ಬುಗಳ ಒಂದು ಕಟ್ಟು 400 ರೂಪಾಯಿ ಇತ್ತು, ಆದರೆ ಈ ಬಾರಿ 500 ರೂಪಾಯಿಗೆ ತಲುಪಿದೆ ಎಂದು ರೈತರು ವಿವರಿಸಿದ್ದಾರೆ.
ಖರೀದಿ ಜೋರು:ಈಗಾಗಲೇ ಸಂಕ್ರಾಂತಿ ಹಬ್ಬಕ್ಕೆ ಜನರು ಮಾರುಕಟ್ಟೆಗೆ ತೆರಳಿ ಹಬ್ಬಕ್ಕೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹೂವು, ಹಣ್ಣು, ಕಬ್ಬು, ಎಳ್ಳು, ಬೆಲ್ಲ, ತೆಂಗಿನ ಕಾಯಿಯಂತಹ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ. ಕೆ.ಆರ್.ಪುರಂ, ಕೆಆರ್ ಮಾರುಕಟ್ಟೆ ಸೇರಿದಂತೆ ನಗರದ ಮಾರುಕಟ್ಟೆಗಳಲ್ಲಿ ಹಬ್ಬದ ವಸ್ತುಗಳನ್ನು ಬೆಂಗಳೂರಿಗರು ಖರೀದಿಸುತ್ತಿದ್ದಾರೆ.ಅಲ್ಲದೇ ಎಳ್ಳು, ಬೆಲ್ಲ, ಒಣ ಕೊಬ್ಬರಿ ಹಾಗೂ ಕೆಲವೊಂದು ಸಿಹಿ ಪದಾರ್ಥಗಳನ್ನು ಖರೀದಿಸುತ್ತಿದ್ದಾರೆ.
ಸಂಕ್ರಾಂತಿ ಹಬ್ಬವಾದ ಕಾರಣ ಕಬ್ಬಿಗೆ ಈಗ ಮಾತ್ರ ಹೆಚ್ಚಿನ ಬೇಡಿಕೆ ಇರುತ್ತದೆ. ಜನವರಿ 13 ಮತ್ತು 14ರವರೆಗೆ ಸುಮಾರು 1,000 ಕಬ್ಬಿನ ತುಂಡುಗಳನ್ನು ಮಾರಾಟ ಮಾಡಿದ್ದೇನೆ. ಪ್ರತಿದಿನ 1,000 ರಿಂದ 1,500 ಕಬ್ಬು ಮಾರಾಟವಾಗುತ್ತಿದೆ.
-ಪದ್ಮಾ, ಮಾರಾಟಗಾರ್ತಿ,ಕೆಆರ್.ಪುರಂ
ಪೂಜೆಗಾಗಿ, ಹೆಚ್ಚಿನ ಜನರು ಎರಡು ಕಬ್ಬನ್ನು ಖರೀದಿಸುತ್ತಾರೆ ತಮಿಳುನಾಡಿನಲ್ಲಿ ಬೆಳೆಯುವ ಈ ಕಬ್ಬುಗಳನ್ನು ಮಂಡ್ಯದ ಸಗಟು ಮಾರುಕಟ್ಟೆಯಿಂದ ಪಡೆಯಲಾಗುತ್ತದೆ. ಅಲ್ಲಿ ಪೂರ್ಣ ಗಾತ್ರದ ಒಂದು ಕಬ್ಬಿಗೆ 40 ರಿಂದ 50ರ ಇದೆ. ಸಾಗಣೆ ವೆಚ್ಚ, ನಮ್ಮ ಖರ್ಚು ಹೆಚ್ಚು ಇರುವುದರಿಂದ ಪ್ರತಿ ಕಬ್ಬಿಗೆ 100 ರೂ.ಮಾರಾಟ ಮಾಡುತ್ತಿದ್ದೇವೆ.
-ಲಕ್ಷ್ಮಿ, ಮಾರಾಟಗಾರ್ತಿ, ಮಲ್ಲೇಶ್ವರಂ