ತಾಲೂಕು ಮಟ್ಟದ ಕಾರ್ಯಾಗಾರ ಚಿಕ್ಕೋಡಿಯಲ್ಲಿ ಯಶಸ್ವಿಯಾಗಿ ನೆರವೇರಿತು
ಚಿಕ್ಕೋಡಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಶಿಕ್ಷಣ ಇಲಾಖೆ, ಪುರಸಭೆ, ಕಾರ್ಮಿಕ ಇಲಾಖೆ, ಹಾಗೂ ಅರಕ್ಷಣಾ ಇಲಾಖೆ ಚಿಕ್ಕೋಡಿ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ಕಾರ್ಯಾಗಾರ ಆಯೋಜಿಸಲಾಯಿತು.
ಈ ಕಾರ್ಯಾಗಾರವು ಕಾರ್ಮಿಕ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಕಾನೂನುಗಳು ಮತ್ತು ಯೋಜನೆಗಳ ಕುರಿತು ಸ್ಥಳೀಯ ಉದ್ಯೋಗದಾತರು, ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿಕ್ಕೋಡಿ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಸ್ಯಕ್ಕೆ ನೀರು ಹಾಕುವುದರ ಮೂಲಕ ಉಧ್ಘಾಟಿಸಲಾಯಿತು. ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಶ್ರೀ ಪ್ರತಾಬ್ ಅವರು ಕಾರ್ಯಕ್ರಮದ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಸತ್ಕರಿಸಿದರು.
ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಕುರಿತು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಯೋಜನೆಗಳ ಪ್ರಯೋಜನಗಳು ಕೂಲಿ ಕಾರ್ಮಿಕರು, ವಾಹನ ಚಾಲಕರು, ಹಾಗೂ ಇತರ ಕಾರ್ಮಿಕರಿಗೆ ತಲುಪಿಸಲು ಈ ಕಾರ್ಯಾಗಾರವು ಮಹತ್ವದ್ದಾಗಿದೆ ಎಂದು ತಿಳಿಸಿದರು. ಕಾರ್ಮಿಕ ಇಲಾಖೆಯಿಂದ ಹೊಸ ಯೋಜನೆಗಳು ತರಲಾಗಿದ್ದು, ಅವುಗಳ ಲಾಭಗಳನ್ನು ಪಡೆಯಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದವರು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಚರ್ಚೆಯಲ್ಲಿ ಪಾಲ್ಗೊಂಡರು.