
ಬಟ್ಟೆ ಬಿಚ್ಚಿಸಿ ಗುತ್ತಿಗೆದಾರನ ಬಳಿ ಹಣ ಸುಲಿಗೆ, ಮಹಿಳೆ ಸೇರಿ ಇಬ್ಬರ ಬಂಧನ
ಬೆಂಗಳೂರು: ಬಟ್ಟೆ ಬಿಚ್ಚಿಸಿ ಮೊಬೈಲ್‌ನಲ್ಲಿ ಫೋಟೊ ತೆಗೆದು ವಿಡಿಯೊ ಮಾಡಿ ಗುತ್ತಿಗೆದಾರನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮಹಿಳೆ ಸೇರಿ, ಇಬ್ಬರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ಮುಖ್ಯರಸ್ತೆ ತುಂಗಾನಗರ ನಿವಾಸಿ ನಯನಾ (26) ಮತ್ತು ಆಕೆಯ ಸ್ನೇಹಿತ ಮೋಹನ್ (30) ಬಂಧಿತರು. ಈ ಹಿಂದೆ ಇವರ ಸಹಚರರಾದ ಅಜಯ್, ಸಂತೋಷ್ ಮತ್ತು ಜಯರಾಜ್ ಎಂಬುವವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಆರೋಪಿಗಳು ಡಿಸೆಂಬರ್ 9ರಂದು ಮಾಗಡಿ ರಸ್ತೆ ತುಂಗಾನಗರದ ಮನೆಯೊಂದಕ್ಕೆ ಗುತ್ತಿಗೆದಾರ ರಂಗನಾಥ ಅವರನ್ನು ಕರೆಸಿಕೊಂಡು ಬೆದರಿಸಿ, ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
"ರಂಗನಾಥ್ ಅವರಿಗೆ ಆರು ತಿಂಗಳ ಹಿಂದೆ ಸ್ಮೇಹಿತ ಶಿವು ಮುಖಾಂತರ ನಯನಾಳ ಪರಿಚಯವಾಗಿದೆ. ಬಳಿಕ ಈಕೆ ತನ್ನ ಮಗುವಿಗೆ ಹುಷಾರಿಲ್ಲ, ಆಸ್ಪತ್ರೆಗೆ ತೋರಿಸಬೇಕು ಎಂದು ಯುಪಿಐ ಪಾವತಿ ಮೂಲಕ 14 ಸಾವಿರ ಪಡೆದಿದ್ದಳು. ಬಳಿಕ ನಿತ್ಯ ರಂಗನಾಥಗೆ ಕರೆ ಮಾಡಿ ಆತ್ಮೀಯವಾಗಿ ಮಾತನಾಡಿ, ಮನೆಗೆ ಕರೆಯುತ್ತಿದ್ದಳು' ಎಂದು ಪೊಲೀಸರು ತಿಳಿಸಿದ್ದಾರೆ.
"ನಯನಾ ಮನೆಗೆ ರಂಗನಾಥ್ ಭೇಟಿ ನೀಡಿದ ವೇಳೆ ಆರೋಪಿಗಳಾದ ಸಂತೋಷ್, ಅಜಯ್, ಜಯರಾಜ್ ಏಕಾಏಕಿ ಮನೆಗೆ ನುಗ್ಗಿ, ಕ್ರೈಂ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದರು. ಮನೆಯಲ್ಲಿ ವ್ಯಭಿಚಾರ ಮಾಡುತ್ತಿದ್ದೀರಾ? ಕೆಳಗೆ ಜೀಪಿನಲ್ಲಿ ಮೇಡಂ ಇದ್ದಾರೆ ಎಂದು ರಂಗನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಅವರ ಬಟ್ಟೆ ಬಿಚ್ಚಿಸಿ ಮೊಬೈಲ್‌ನಲ್ಲಿ ಫೋಟೊ ತೆಗೆದು ವಿಡಿಯೊ ಮಾಡಿದ್ದರು' ಎಂದು ಪೊಲೀಸರು ಹೇಳಿದ್ದಾರೆ.
ಬಳಿಕ ಆರೋಪಿಗಳು ರಂಗನಾಥ ಅವರ ಬಳಿ 29 ಸಾವಿರ ನಗದು, 5 ಲಕ್ಷ ಮೌಲ್ಯದ ಚಿನ್ನಾಭರಣ ಕಿತ್ತುಕೊಂಡಿದ್ದರು. ಯುಪಿಐ ಪಾವತಿ ಮುಖಾಂತರ 26 ಸಾವಿರ ಹಣ ವರ್ಗಾವಣೆ ಮಾಡಿಕೊಂಡು ಆಟೋದಲ್ಲಿ ಪರಾರಿಯಾಗಿದ್ದರು. ನಯನಾ ಸಹ ದ್ವಿಚಕ್ರ ವಾಹನದಲ್ಲಿ ಆರೋಪಿಗಳನ್ನು ಹಿಂಬಾಲಿಸಿದ್ದಳು' ಎಂದು ತಿಳಿಸಿದರು.
ಶ್ರೀಮಂತರಿಗೆ ಬಲೆ:ನಗರದಲ್ಲಿ ನೆಲೆಸಿರುವ ಹಾಸನದ ನಯನಾ ಪತಿಯಿಂದ ದೂರವಾಗಿದ್ದಾರೆ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಆರೋಪಿಗಳ ಜತೆಗೆ ಸೇರಿ ಹಣವಂತರನ್ನು ಪರಿಚಯಿಸಿಕೊಂಡು ಮನೆಗೆ ಆಹ್ವಾನಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದರು' ಎಂಬುದು ತನಿಖೆ ವೇಳೆ ಗೊತ್ತಾಗಿದೆ.