ತೆರಿಗೆ ವಂಚನೆ-ತೆರಿಗೆ ಸೋರಿಕೆ-ತೆರಿಗೆ ಕಳ್ಳತನದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ
- Shivaraj Bandigi
- 15 Jan 2024 , 1:26 AM
- Bengaluru
- 116
ಬೆಂಗಳೂರು : ರಾಜ್ಯದಲ್ಲಿ ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನ ಪ್ರಕರಣಗಳ ಬಗ್ಗೆ ತೀವ್ರ ನಿಗಾ ವಹಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಾಣಿಜ್ಯ ತೆರಿಗೆ ಇಲಾಖೆಯ ತೆರಿಗೆ ಸಂಗ್ರಹ ಬೆಳವಣಿಗೆ ದರ ಶೇ. 19.2 ರಷ್ಟಿದ್ದು, ದೇಶದಲ್ಲಿಯೇ ಅತಿ ಹೆಚ್ಚಿದೆ ಎಂದು ಮೆಚ್ವುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಇಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳದೆ ತೆರಿಗೆ ವಂಚಿಕೆ ಪ್ರಕರಣಗಳನ್ನು ಹೆಚ್ಚೆಚ್ಚು ಪತ್ತೆ ಹಚ್ಚಿ ತೆರಿಗೆ ಸಂಗ್ರಹ ಗುರಿಯನ್ನು ದಾಟಿ ಸಾಧನೆ ಮಾಡುವ ಅವಕಾಶಗಳಿವೆ. ಇದನ್ನು ಸಾಧಿಸಿ ತೋರಿಸಿ ಎಂದರು.
ಇಲಾಖೆಯು enforcement ಅನ್ನು ಇನ್ನಷ್ಟು ತೀವ್ರವಾಗಿ ನಡೆಸುವ ಮೂಲಕ ತೆರಿಗೆ ವಂಚನೆ ತಡೆಗಟ್ಟುವ ಕಡೆಗೆ ಹೆಚ್ಚು ಆಸಕ್ತಿ ಕೊಡಬೇಕು ಎಂದರು.
ಬೆಳವಣಿಗೆ ದರವು ಶೇ. 19.2 ರಷ್ಟಿದ್ದು, ದೇಶದಲ್ಲಿಯೇ ಅತಿ ಹೆಚ್ಚು. ದೇಶದ ಸರಾಸರಿ ತೆರಿಗೆ ಸಂಗ್ರಹ ಬೆಳವಣಿಗೆ ದರ ಶೇ.15 ರಷ್ಟು ಮಾತ್ರ ಇದೆ. ದೇಶದ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ರಾಜ್ಯದ ಪಾಲು ಶೇ. 9.4 ರಷ್ಟಿದೆ. ಕಳೆದ ಬಾರಿಗಿಂತ ಈ ಬಾರಿ ರಾಜ್ಯದ ಪಾಲು ಹೆಚ್ಚಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಶೇ. 24ರ ಬೆಳವಣಿಗೆ ಗುರಿಯನ್ನು ನೀಡಲಾಗಿರುವುದನ್ನುವಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ಈ ಗುರಿ ದಾಟಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಲ್ಲದೆ
ತೆರಿಗೆ ವಂಚನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ತೆರಿಗೆ ಸೋರಿಕೆ ತಡೆಗಟ್ಟಲು ನಿರ್ದೇಶನ ನೀಡಿದರು.
ಗುರಿಗಿಂತ ಹೆಚ್ಚಿನ ಸಾಧನೆಯಾಗಬೇಕು. ಹಿಂದೆ ಉಳಿದವರು ಎಲ್ಲ ಪ್ರಯತ್ನ ಮಾಡಬೇಕು. ಜಾಗೃತ ದಳದವರು ಸಹಕರಿಸಬೇಕು. ಎರಡು ತಿಂಗಳ ನಂತರ ಮತ್ತೆ ಪ್ರಗತಿ ಪರಿಶೀಲಿಸಲಾಗುವುದು. ಆ ವೇಳೆಗೆ ಇನ್ನಷ್ಟು ಪ್ರಗತಿಯ ವರದಿ ನೀಡಿ. ಮುಂದಿನ ಸಭೆ ವೇಳೆಗೆ ಒಟ್ಟಾರೆ ಪರಿಸ್ಥಿತಿ ಈಗಿರುವುದಕ್ಕಿಂತ ಹೆಚ್ವು ಆಶಾದಾಯವಾಗಿರುವಂತೆ ಕ್ರಮ ವಹಿಸಿ ಎಂದರು.
ತೆರಿಗೆ ಕಳ್ಳತನ ತಡೆಯುವುದಕ್ಕಾಗಿ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ನಿಮ್ಮ ಪ್ರಯತ್ನದಿಂದ ರಾಜ್ಯಕ್ಕೆ ಹೆಚ್ಚು ತೆರಿಗೆ ಬರಲು ಸಾಧ್ಯ. ಅನೇಕ ಭಾಗಗಳಲ್ಲಿ ಅನೇಕ ಉತ್ಪನ್ನಗಳಲ್ಲಿ ತೆರಿಗೆ ವಂಚನೆ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಿ ತೆರಿಗೆ ಸಂಗ್ರಹಿಸಬೇಕು. ಹೆಚ್ಚು ತೆರಿಗೆ ಸಂಗ್ರಹ ಮಾಡಿದರೆ ಅಭಿವೃದ್ಧಿ ಕೆಲಸ ಮಾಡಲು ಹೆಚ್ಚು ಅನುಕೂಲವಾಗುತ್ತದೆ. ಸಾಮೂಹಿಕ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು ಎಂದು ಸೂಚಿಸಿದರು.
ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಹಣಕಾಸು ಇಲಾಖೆಯ ಕಾರ್ಯದರ್ಶಿಗಳಾದ ಡಾ. ಪಿ.ಸಿ. ಜಾಫರ್ ಹಾಗೂ ಡಾ. ಎಂ.ಟಿ. ರೇಜು, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ.ಶಿಖಾ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು ಮತ್ತು ನಸೀರ್ ಅಹ್ಮದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.