ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಹಲ್ಯಾಳ ಗ್ರಾಮದ ದಲಿತ ಕಾಲೋನಿಗೆ ಗಟಾರ್ ಭಾಗ್ಯವಿಲ್ಲ!: ಶಾಸಕರೇ ಏನು ಮಾಡುತ್ತಿದ್ದೀರಿ?.

localview news

ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಹಳಷ್ಟು ಮನೆಗಳಿವೆ. ಆದರೆ ಮೂಲ ಸೌಕರ್ಯ ಮಾತ್ರ ಶೂನ್ಯ. 5 ವರ್ಷಕ್ಕೊಮ್ಮೆ ಚುನಾವಣೆ ಬರುವಾಗ ಮುಖ ತೋರಿಸುವ ರಾಜಕಾರಣಿಗಳನ್ನು ಬಿಟ್ಟರೆ, ಈ ಸಮುದಾಯದ ಮೂಲ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದವರು ಯಾರೂ ಇಲ್ಲ.

ಹಲ್ಯಾಳ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯ ಜನರಿಗೆ ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಯಾವುದೇ ಮೂಲಭೂತ ಸೌಕರ್ಯಗಳು ಕೈಗೆಟಕ್ಕಿಲ್ಲ. ಇದರಿಂದ ಈ ಸಮುದಾಯದ ಜನರ ವಸತಿಗೂ ಅನಾನುಕೂಲ ಉಂಟಾಗಿದೆ. ಸುಮಾರು ವರ್ಷಗಳಿಂದ ಸ್ಥಳೀಯ ಶಾಸಕರಿಗೂ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಿಗೂ ವಿವಿಧ ಅಧಿಕಾರಿಗಳಿಗೂ ಮನವಿ ಸಲ್ಲಿಸಿದರು ಗ್ರಾಮ ಪಂಚಾಯಿತಿ ಸದಸ್ಯರಿಂದ ಆರಂಭಗೊಂಡು ಶಾಸಕರವರೆಗೆ ಯಾರೂ ಕ್ಯಾರೇ ಮಾಡಿಲ್ಲ.

ತ್ಯಾಜ್ಯ ನೀರು ಹರಿಯಲು ಚರಂಡಿ (ಗಟರ್) ನಿರ್ಮಾಣ ಮಾಡದೆ ಹಾಗೆ ಉಳಿದಿದೆ.

ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ತಾಲೂಕು ಅಧಿಕಾರಿಗಳು ಚರಂಡಿ ನಿರ್ಮಾಣ ಮಾಡಿಕೊಡಬೇಕೆಂದು ಇಲ್ಲಿನ ನಿವಾಸಿಗಳು ಮತ್ತೆ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ಸಮಸ್ಯೆ ಬಗ್ಗೆ ಮಾತನಾಡಿದ ಸೇವಂತಾ ಮಾದರ, ಚರಂಡಿ ನಿರ್ಮಾಣ ಮಾಡಿ ಕೊಡಿ ಎಂದು ಸುಮಾರು ಬಾರಿ ಅರ್ಜಿ ನೀಡಿದರೂ ಯಾವುದೇ ರೀತಿಯ ಪ್ರತಿಫಲ ನಮಗೆ ದೊರತಿಲ್ಲ.

ಚರಂಡಿ ಇಲ್ಲದ ಕಾರಣ ನೀರೆಲ್ಲಾ ಒಂದೆಡೆ ಸಂಗ್ರಹವಾಗುವುದರಿಂದ ಕೊಳೆತು ಗಬ್ಬು ವಾಸನೆ ಬರುತ್ತದೆ. ಸೊಳ್ಳೆ ಉತ್ಪತ್ತಿ ತಾಣವಾಗಿ ಬದಲಾಗಿದೆ. ಇದರಿಂದ ಮಕ್ಕಳು ಸಹಿತ ಎಲ್ಲರ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚರಗೊಂಡು ಆದಷ್ಟು ಬೇಗ ಗಟಾರ ನಿರ್ಮಾಣ ಮಾಡಿಕೊಡಬೇಕು.

ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

Latest Articles