ಕರ್ನಾಟಕ- ಮಹಾ ಗಡಿ ವಿವಾದ ಆಡಳಿತ ಸರ್ಕಾರ ರಣಹೇಡಿಯಂತೆ ಬಾಲ ಮುದುರಿಕೊಂಡಿದೆ : HD ದೇವೇಗೌಡ ಕಿಡಿ

ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳ ಗಡಿ ವಿವಾದ ತೀವ್ರಗೊಂಡಿದ್ದು, ಆಡಳಿತ ಸರ್ಕಾರವು ರಣಹೇಡಿಯಂತೆ ಬಾಲ ಮುದುರಿಕೊಂಡಿರುವುದು, ವಿರೋಧ ಪಕ್ಷವು ಈ ವಿಷಯಕ್ಕೂ  ತಮಗೂ ಸಂಬಂಧವೇ ಇಲ್ಲದಿರುವಂತೆ ಇರುವುದು, ಕರ್ನಾಟಕಕ್ಕೆ ಕನ್ನಡ-ಕೇಂದ್ರಿತ ಸರ್ಕಾರದ ಅನಿವಾರ್ಯತೆ ಎಷ್ಟಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

promotions

ಕರ್ಣಾಟ ಬಲಂ ಅಜೇಯಂಎಂದು ಕೊಂಡಾಡುವಷ್ಟು ಬಲಿಷ್ಠವಾಗಿದ್ದ ನಮ್ಮ ರಾಜ್ಯವು ಇಂದು ಛಿದ್ರ ಛಿದ್ರವಾಗುವ ಭಯದ ವಾತವರಣ ನಿರ್ಮಾಣವಾಗಿರುವುದಕ್ಕೆ ರಾಷ್ಟ್ರೀಯ ಪಕ್ಷಗಳ ನಿರ್ಲಕ್ಷ್ಯಕರ ಆಡಳಿತ ಕಾರಣವೇ ಹೊರತು ಮತ್ತೀನೇನು ಅಲ್ಲ ಎಂದು ಹೇಳಿದ್ದಾರೆ.

promotions

ಕರ್ನಾಟಕದ ಗತವೈಭವ ಮರುಕಳಿಸಬೇಕಿದ್ದರೇ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕಿದೆ. ಇದು ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದರಿಂದ ಮಾತ್ರ ಸಾಧ್ಯ ಎಂದಿದ್ದಾರೆ.

ಭಾರತ ಒಕ್ಕೂಟ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡು ಎಪ್ಪತ್ತೈದು ವರ್ಷಗಳು ಕಳೆದು ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಹೊತ್ತಿನಲ್ಲೂ ಕನ್ನಡಿಗರಾದ ನಾವು ನಮ್ಮ ನೆಲ, ಜಲ, ಭಾಷೆಗಾಗಿ ಹೋರಾಡುತ್ತಲೇ ಇರುವುದು ತೀವ್ರ ಕಳವಳಕಾರಿ ಸಂಗತಿ.

ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮೂಲಕ, ನಮ್ಮ ಪಾಲಿನ ನೀರನ್ನು ನಮ್ಮಿಂದ ಕಸಿಯುವುದರ ಮೂಲಕ, ನಮ್ಮ ಗಡಿಯನ್ನು ಆಕ್ರಮಿಸಿ ಉಪಟಳ ನೀಡುವ ಮೂಲಕ, ಕನ್ನಡದ ಮಕ್ಕಳ ಉದ್ಯೋಗ ಕಸಿಯುವ ಮೂಲಕ ಈ ರಾಷ್ಟ್ರೀಯ ಪಕ್ಷಗಳು ಮತ್ತು ಕೆಲವು ಸಂಘಟನೆಗಳು ನಿರಂತರವಾಗಿ ಕನ್ನಡಿಗರ ಮೇಲೆ ದಾಳಿಗೆ ಮಾಡುತ್ತಲೇ ಬರುತ್ತಿವೆ.

ಸಿಕ್ಕ ಅಲ್ಪಾವಧಿಯ ಅಧಿಕಾರದಲ್ಲಿ ನಾಡಿನ ಸಹಸ್ರಾರು ನೀರಾವರಿ ಯೋಜನೆಗಳಿಗೆ ಕಾಯಕಲ್ಪ ಹಾಕುವಾಗಲು, ಈ ನೆಲದ ರೈತರೊಂದಿಗೆ ಯುವ ಸಮುದಾಯಕ್ಕೂ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಇಪ್ಪತ್ತು ಸಕ್ಕರೆ ಕಾರ್ಖಾನೆಗಳೊಂದಿಗೆ ನೂರಾರು ವಿವಿಧ ಕಾರ್ಖಾನೆಗಳ ನಿರ್ಮಾಣಕ್ಕೆ ಒತ್ತು ನೀಡಿ ಅನುಷ್ಠಾನಗೊಳಿಸುವಾಗಲು, ನೂತನ ರೈಲ್ವೆ ಮಾರ್ಗಗಳನ್ನು ನಾಡಿಗೆ ತರುವಾಗಲು, ನಮ್ಮದೇ ಕಾವೇರಿ ನೀರನ್ನು ನಮಗೆ ಕುಡಿಯಲು ಪಡೆಯುವಾಗಲು, ಕನ್ನಡದ ಮಕ್ಕಳಿಗಾಗಿ ಯಾವುದೇ ಯೋಜನೆಯನ್ನು ತರುವಾಗಲು ರಾಷ್ಟ್ರೀಯ ಪಕ್ಷಗಳು ಉಪಟಳ ನೀಡುತ್ತಲೇ ಬಂದಿವೆ ಆದರೆ ನನ್ನ ಕನ್ನಡದ ಜನತೆಗಾಗಿ ನನ್ನ ಹೋರಾಟ ನನ್ನ ಕೊನೆಯುಸಿರಿನವರೆಗೂ ನಿರಂತರ,

ಕನ್ನಡದ ರೈತರ ಬದುಕು ಹಸನಾಗಿಸಲು ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಲು ಪ್ರಧಾನಿ ಪಟ್ಟವನೇ ನಾನು.

ಪ್ರಧಾನಿಯಾಗಿದ್ದ ಆ ಅಲ್ಪ ಸಮಯದಲ್ಲೇ ಗುಜರಾತಿನ ನರ್ಮದಾ ನದಿ ವಿವಾದ, ಕಾಶ್ಮೀರದ ಚುನಾವಣೆಯಂತಹ ಸೂಕ್ಷ್ಮಾತಿ-ಸೂಕ್ಷ್ಮ ವಿಚಾರಗಳನ್ನೇ ಬಗೆಹರಿಸಿದ್ದೇನೆ. ಆದರೆ ಇಂದು ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಎರಡು ಕಡೆಯೂ ಒಂದೇ ಪಕ್ಷ ಅಧಿಕಾರದಲ್ಲಿದ್ದರು ಕನ್ನಡಿಗರಿಗೆ ಸದಾ ಕಂಟಕವಾಗಿ ಕಾಡುತ್ತಿರುವ ಬೆಳಗಾವಿ ಗಡಿ ವಿವಾದವನ್ನು ಬಗೆಹರಿಸಲು ಹಿಂದೇಟು ಹಾಕುತ್ತಿರುವುದು ಆಡಳಿತ ಪಕ್ಷ ಕನ್ನಡಿಗರ ಬಗ್ಗೆ ಎಷ್ಟು ತಾತ್ಸಾರ ಹೊಂದಿದೆ ಎಂಬುದನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.

1956ನೇ ಇಸವಿಯಲ್ಲಿ ರಾಜ್ಯಗಳು ಪುನರ್ವಿಂಗಡಣೆಯಾದ ಸಂದರ್ಭದಲ್ಲಿ ಬೆಳಗಾವಿ  ಭಾಗವು ಮೈಸೂರು ರಾಜ್ಯಕ್ಕೆ ಸೇರಿಸಿದಾಗಿನಿಂದಲೂ ಮರಾಠಿಗರು ತಕರಾರು ಮಾಡುತ್ತಲೇ ಬಂದರು. ಈ ವಿವಾದ ಬಗೆಹರಿಸಲು ಭಾರತದ ಸರ್ವೋಚ್ಚ ನ್ಯಾಯಾಲಯದ ಮೂರನೇ ಮುಖ್ಯನ್ಯಾಯಾಧೀಶರಾದ ಶ್ರೀ ಮೆಹರ್ ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು. ಮಹಾಜನ್ ವರದಿಯು ಕೂಡ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಹೇಳಿದರು ಮರಾಠಿಗರು ತಮ್ಮ ಮೊಂಡತನ ಬಿಡಲಿಲ್ಲ.

ತಕಾರಾರುಗಳು ತಾರಕಕ್ಕೇರಿ 2006ರಲ್ಲಿ ಪರಿಸ್ಥಿತಿ ಮುಖ್ಯಮಂತ್ರಿಯಾಗಿದ್ದ ಶ್ರೀ ಹೆಚ್.ಡಿ ಕುಮಾರಸ್ವಾಮಿ ರವರು ಅಸೆಂಬ್ಲಿ ಅಧಿವೇಶನವನ್ನು ಕರೆದು ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿಯಾಗಿ ಘೋಷಿಸಿ ಪ್ರತಿ ವರ್ಷ ಜಂಟಿ ಶಾಸಕಾಂಗ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ಸುವರ್ಣ ಸೌಧ ನಿರ್ಮಿಸಲು ಅಡಿಗಲ್ಲಿಟ್ಟರು.

ಕೆಚ್ಚೆದೆಯಿಂದ ಕನ್ನಡಿಗರ ಪರವಾಗಿ ಖುದ್ದು ಅಂದಿನ ಕೇಂದ್ರ ಗೃಹ ಮಂತ್ರಿಯ ವಿರೋಧದ ನಡುವೆಯೂ ಕನ್ನಡಿಗರ ಪರವಾಗಿ ನಿಂತ ಏಕೈಕ ನಾಯಕ ಕುಮಾರಸ್ವಾಮಿರವರ ದೃಢ ನಿಲುವು, ಕನ್ನಡಪರತೆಯ ಕಾರಣಕ್ಕಾಗಿಯೇ ಇಂದು ಬೆಳಗಾವಿಯಲ್ಲಿ ಸುವರ್ಣಸೌಧ ತಲೆಯೆತ್ತಿ ನಿಂತಿದೆ. ಬೆಳಗಾವಿ ಕರ್ನಾಟಕದ್ದೇ ಎಂದು ಮಾರ್ಧನಿಸುತ್ತಿದೆ.

ಈಗ ಕನ್ನಡಿಗರ ಪಾಲಿಗೆ 'ಮಾಡು ಇಲ್ಲವೆ ಮಡಿ' ಎನ್ನುವ ಸಂದರ್ಭ

ನಾವು ಕಟ್ಟುವ ತೆರಿಗೆ ಹಣದ ಪಾಲು ನಮಗೆ ಸಿಗಬೇಕಾದರೆ, ನಮ್ಮ ಮಕ್ಕಳ ಪಾಲಿಗೆ ಉದ್ಯೋಗ ದಕ್ಕಬೇಕಾದರೆ, ನಮ್ಮ ಭಾಷೆ ಸಂಸ್ಕೃತಿಯನ್ನು ಪರಕೀಯರ ದಾಳಿಯಿಂದ ಕಾಪಾಡಬೇಕಾದರೆ, ಗಡಿ ವಿವಾದ ಬಗೆಹರಿಯಬೇಕಾದರೆ ಕನ್ನಡಿಗರೆಲ್ಲರೂ 'ನಮ್ಮತನವನ್ನು ಅಡವಿಡದೆ ನಮ್ಮವರಿಗಷ್ಟೇ ನಮ್ಮ ನೋವು ಅರಿವಿಗೆ ಬರುವುದು ಕಟು ಸತ್ಯವನ್ನು ಅರ್ಥೈಸಿಕೊಂಡು ಕನ್ನಡದ ಪ್ರಾದೇಶಿಕ ಪಕ್ಷ ಬಲಪಡಿಸಬೇಕಿದೆ. ಕರ್ನಾಟಕವನ್ನು ಇವೆರಡು ರಾಷ್ಟ್ರೀಯ ಪಕ್ಷಗಳ ದಳ್ಳುರಿಯಿಂದ ಉಳಿಸಿಕೊಳ್ಳಬೇಕಾಗಿದೆ.

ಕನ್ನಡಿಗರೆಲ್ಲ ಒಂದಾಗೋಣ ಕನ್ನಡದ ಶಕ್ತಿ ತೋರಿಸೋಣ..

Read More Articles