ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಬೇಡಿಕೆಗಳನ್ನು ಈಡೇರಿಸಿ - ಶಿವಕುಮಾರ ಮ್ಯಾಗಳಮನಿ.
- Shivaraj Bandigi
- 14 Jan 2024 , 10:12 PM
- Raichur
- 64
ಕವಿತಾಳ : ಪಟ್ಟಣದ ಹಾಗೂ ಸುತ್ತಲಿನ ಹಳ್ಳಿಗಳಿಗೆ ಆಸರೆಯಾಗಿರುವ ಕವಿತಾಳ ಪಟ್ಟಣದಲ್ಲಿ ಇರುವ ಸಮುದಾಯ ಆರೋಗ್ಯ ಕೇಂದ್ರವು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲು ವಿಫಲವಾಗುತ್ತಿದೆ.
ಜನವರಿ ತಿಂಗಳ ನಂತರ ಇಲ್ಲಿನ ವೈದ್ಯರು ಸೇರಿ ಸಿಬ್ಬಂದಿಗಳ ಅಲಕ್ಷ್ಯ, ಅದಕ್ಷತೆ ಮತ್ತು ಇಚ್ಚಾಸಕ್ತಿಯ ಕೊರತೆಯಿಂದಾಗಿ ಇತ್ತಿಚಿನ ದಿನಗಳಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಸರಿಯಾದ ಚಿಕಿತ್ಸೆ ಹಾಗೂ ಸ್ಪಂದನೆ ಸಿಗುತ್ತಿಲ್ಲ ಆದ್ದರಿಂದ ಕೂಡಲೇ ವಿಶೇಷ ಗಮನ ಹರಿಸಿ ಸೂಚಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕೆಂದು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆಡಳಿತ ವೈದ್ಯಾಧಿಕಾರಿಯಾದ ಡಾ. ಸುರೇಂದ್ರ ಬಾಬು ಅವರಿಗೆ ವಕೀಲರು ಹಾಗೂ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷರು ಮತ್ತು ಕವಿತಾಳ ನವ ನಿರ್ಮಾಣ ವೇದಿಕೆಯ ಅಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಆಗ್ರಹಿಸಿದ್ದಾರೆ.
ನಿರ್ಲಕ್ಷ್ಯ ತೋರಿದರೆ ಆಸ್ಪತ್ರೆಯ ಮುಂಭಾಗದಲ್ಲಿ ಸಾರ್ವಜನಿಕರೊಂದಿಗೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಸಲ್ಲಿಸದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ MBBS ವೈದ್ಯರನ್ನು ನೇಮ ಮಾಡಿ, ಕೇಂದ್ರ ಸ್ಥಾನದಲ್ಲೆ ಇರುವಂತೆ ಸೂಚಿಸಬೇಕು, ಆಡಳಿತದ ಹಿತದೃಷ್ಟಿಯಿಂದ ಆಡಳಿತ ವೈದ್ಯಾಧಿಕಾರಿಯನ್ನು ಬದಲಾವಣೆ ಮಾಡಿ ಈಗಿರುವ ಯಾರನ್ನಾದರೂ ನಿಯೋಜಿಸಬೇಕು, ಕರ್ತವ್ಯ ಲೋಪ ಎಸಗುವ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ವೈದ್ಯರಾದ ಡಾ. ಪ್ರವೀಣ್ ಕುಮಾರ್ ರವರನ್ನು ಕವಿತಾಳದಿಂದ ಬಿಡುಗಡೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು, ಕರ್ತವ್ಯ ಲೋಪ ಎಸಗುವ ಸ್ಟಾಪ್ ನರ್ಸ್ ಶ್ರೀಮತಿ ಸರಳಾ ಮತ್ತು ಸುಹಾಸಿನಿ ಇವರನ್ನು ಕೂಡಲೇ ಸೇವೆಯಿಂದ ವಜಾ ಮಾಡಿ ಶಿಸ್ತು ಕ್ರಮ ಜರುಗಿಸಬೇಕು. ಈಗಿರುವ ಎಲ್ಲಾ ವೈದ್ಯರು ಮತ್ತು ದಾದಿಯರು ದಿನದ 24 ಘಂಟೆಗಳ ಕಾಲ ಸೇವೆಗೆ ಲಭ್ಯವಾಗುವಂತೆ ಹಾಗೂ ಅವರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲೆ ಇರುವಂತೆ ಸೂಚಿಸಬೇಕು.
ಆಸ್ಪತ್ರೆಗೆ ಆಗತ್ಯವಿರುವ ಇತರೆ ಸೌಲಭ್ಯಗಳನ್ನು ಒದಗಿಸಬೇಕು, ಎಕ್ಸ್ ರೇ, ಸ್ಕ್ಯಾನಿಂಗ್ ಹಾಗೂ ರಕ್ತ ಪರೀಕ್ಷೆ, ಇಸಿಜಿ ಸೌಲಭ್ಯಗಳು ಸಮರ್ಪಕವಾಗಿ ಸಿಗುವಂತೆ ಮಾಡಬೇಕು. ಬೇರೆ ಕಡೆ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಆಡಳಿತದ ವಿಚಾರದಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಲು ಸೂಚಿಸಬೇಕಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.